ರಾಜ್ಯ

ನ್ಯಾಯಮೂರ್ತಿಗಳ ನೇಮಕ ವಿಚಾರ; ಮುಂದುವರೆದ ವಕೀಲ ಪ್ರತಿಭಟನೆ, ಮೋದಿಗೆ ಸಿಎಂ ಪತ್ರ

Manjula VN
ಬೆಂಗಳೂರು: ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿಗೆ ಆಗ್ರಹಿಸಿ ವಕೀಲರು ನಡೆಯುತ್ತಿರುವ ಸರದಿ ಉಪವಾಸ ಸತ್ಯಾಗ್ರಹ ಮಂಗಳವಾರ ಕೂಡ ಮುಂದುವರೆದಿದ್ದು, ಪ್ರತಿಭಟನಾ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಬೆಂಬಲಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನ್ಯಾಯಮೂರ್ತಿಗಳ ನೇಮಕಾತಿಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಕೋರಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮಂಗಳವಾರ ಪತ್ರ ಬರೆದಿದ್ದಾರೆ. 
ಕರ್ನಾಟಕ ಹೈಕೋರ್ಟ್'ಗೆ ಒಟ್ಟು 62 ನ್ಯಾಯಮೂರ್ತಿಗಳ ಹುದ್ದೆಗಳು ಮಂಜೂರಾಗಿವೆ. ಅದರೆ, ಆ ಪೈಕಿ 37 ನ್ಯಾಯಮೂರ್ತಿ ಹುದ್ದೆಗಳು ಖಾಲಿಯಿದ್ದು, ಸದ್ಯ 25 ನ್ಯಾಯಮೂರ್ತಿಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. 
ಹೈಕೋರ್ಟ್'ನ ಬೆಂಗಳೂರು, ಧಾರವಾಡ ಹಾಗೂ ಕಲಬುರಗಿ ಪೀಠಗಳಲ್ಲಿ ಸುಮಾರು ರೂ.2.5 ಲಕ್ಷ ಪ್ರಕರಗಳು ಇತ್ಯರ್ಥ ಬಾಕಿ ಉಳಿದಿದೆ. ವಿಲೇವಾರಿಗೆ ಬಾಕಿ ಉಳಿಯುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದರೆ, ನ್ಯಾಯಮೂರ್ತಿಗಳ ಸಂಖ್ಯೆ ಮಾತ್ರ ಕುಸಿಯುತ್ತಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ ಎಂದು ತಿಳಿದುಬಂದಿದೆ. 
ನ್ಯಾಯಮೂರ್ತಿಗಳ ಕೊರತೆಯಿಂದ ಕಕ್ಷಿದಾರರು ತ್ವರಿತವಾಗಿ ನ್ಯಾಯ ಪಡೆಯಲಾಗುತ್ತಿಲ್ಲ. ಇದರಿಂದ ನ್ಯಾಯಮೂರ್ತಿಗಳ ನೇಮಕಕ್ಕೆ ಒತ್ತಾಯಿಸಿ ವಕೀಲ ಸಮುದಾಯ ಈಗಾಗಲೇ ಪ್ರತಿಭಟನೆ ಆರಂಭಿಸಿದೆ. ಕರ್ನಾಟಕ ಹೈಕೋರ್ಟ್ ಕೊಲಿಜಿಯಂ, 2016ರಿಂದ ಒಟ್ಟು 45 ಹೆಸರುಗಳನ್ನು ಶಿಫಾರಸು ಮಾಡಿದ್ದರೂ, ನ್ಯಾಯಾಮೂರ್ತಿಗಳ ನೇಮಕಾತಿ ಸಂಖ್ಯೆ 12 ಮೀರಿಲ್ಲ ಎಂದು ಪತ್ರದಲ್ಲಿ ಮುಖ್ಯಮಂತ್ರಿಗಳು ಬೇಸರ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ. 
ಇದಲ್ಲದೆ, ನ್ಯಾಯಮೂರ್ತಿಗಳ ನೇಮಕ್ಕಾಗಿ ನಿಮಗೆ ಹಾಗೂ ಸಂಬಂಧಪಟ್ಟ ಸಾಂವಿಧಾನಿಕ ಸಂಸ್ಥೆಗಳಿಗೆ ಅನೇಕರು ಹಲವು ಮನವಿ ಸಲ್ಲಿಸಿದ್ದರೂ ನ್ಯಾಯಮೂರ್ತಿಗಳ ನೇಮಕ ವಿಚಾರದಲ್ಲಿ ಕಿವುಡುತನ ಪ್ರದರ್ಶಿಸಲಾಗಿದೆ. ಆದ್ದರಿಂದ ನ್ಯಾಯಮೂರ್ತಿಗಳ ನೇಮಕಕ್ಕೆ ಕೂಡಲೇ ಕ್ರಮ ಜರುಗಿಸಬೇಕು. ಆ ನಿಟ್ಟಿನಲ್ಲಿ ಮುಂದಿನ ಪ್ರಸ್ತಾವನೆಗಳನ್ನು ಕೂಡಲೇ ಪರಿಗಣಿಸಬೇಕೆಂದು ಮುಖ್ಯಮಂತ್ರಿಗಳು ಪ್ರಧಾನಿ ಮೋದಿ ಬಳಿ ಮನವಿ ಮಾಡಿದ್ದಾರೆ. 
ಹಾಗೆಯೇ ದೇಶದ ವಿವಿಧ ಹೈಕೋರ್ಟ್ ಗಳಿಗೆ 2017ರ ಜ.1 ರಿಂದ ನೇಮಕ ಮಾಡಿರುವ ಹಾಗೂ ಸದ್ಯ ಖಾಲಿಯಿರುವ ನ್ಯಾಯಮೂರ್ತಿಗಳ ಸಂಖ್ಯೆ ಕುರಿತು ಅಂಕಿಅಂಶಗಳನ್ನು ಒಳಗೊಂಡ ವಿವರಗಳನ್ನು ಮುಖ್ಯಮಂತ್ರಿಗಳು ತಮ್ಮ ಪತ್ರದೊಂದಿಗೆ ಕಳುಹಿಸಿಕೊಟ್ಟಿದ್ದಾರೆ. ಅದರಂತೆ 2017ರಿಂದ ದೇಶದ ವಿವಿಧ ಒಟ್ಟು 150 ನ್ಯಾಯಮೂರ್ತಿಗಳನ್ನು ನೇಮಿಸಲಾಗಿದೆ. ಆ ಪೈಕಿ ಕರ್ನಾಟಕ ಹೈಕೋರ್ಟ್ ಗೆ ಕೇವಲ 10 ನ್ಯಾಯಮೂರ್ತಿಗಳನ್ನು ನೇಮಿಸಿದ್ದು, ಪ್ರಸ್ತುತ ಒಟ್ಟು ಶೇ.61ರಷ್ಟು ಹುದ್ದೆಗಳು ಖಾಲಿಯಿವೆ ಎಂದು ಪತ್ರದ ಮೂಲಕ ಪ್ರಧಾನಮಂತ್ರಿಗಳ ಗಮನ ಸೆಳೆಯಲಾಗಿದೆ. 
ನಿನ್ನೆಯಷ್ಟೇ ಪ್ರತಿಭಟನಾ ನಿರತ ವಕೀಲರನ್ನು ಭೇಟಿ ಮಾಡಿದ ಮಾಜಿ ಪ್ರಧಾನಿ ದೇವೇಗೌಡ ಅವರು, ನ್ಯಾಯಮೂರ್ತಿಗಳ ನೇಮಕಾತಿ ವಿಚಾರಕ್ಕೆ ಸಂಬಂಧಿಸಿದ್ದಂತೆ ಶೀಘ್ರದಲ್ಲಿಯೇ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡುತ್ತೇನೆಂದು ಭರವಸೆ ನೀಡಿದ್ದಾರೆ. 
ಸುಪ್ರೀಂಕೋರ್ಟ್ ಮಾಜಿ ನ್ಯಾಯಾಮೂರ್ತಿ ವಿ.ಗೋಪಾಲ ಗೊಡ ಅವರೂ ಕೂಡ ವಕೀಲರನ್ನು ಭೇಟಿ ಮಾಡಿ, ನ್ಯಾಯಮೂರ್ತಿಗಳ ನೇಮಕಾತಿಯಾಗದೇ ಹೋದರೆ, ತಾವೂ ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ. 
SCROLL FOR NEXT