ಕಾರವಾರ: ಕಾರವಾರದ ಪರೇಶ್ ಮೇಸ್ತಾ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಳಿಸಿರುವ ಕರಾವಳಿ ಪೊಲೀಸರು ಮಂಗಳವಾರ ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ ಭಟ್ಕಳದ ಶಿರಾಲಿ ಎಂಬಲ್ಲಿ ಆಶಿಫ್ ರಫೀಕ್ ಎಂಬಾತನನ್ನು ಕರಾವಳಿ ಪೊಲೀಸರು ಬಂಧಿಸಿದ್ದು, ಪ್ರಕರಣದ ಮೂರನೇ ಶಂಕಿತ ವ್ಯಕ್ತಿಯನ್ನು ಶೀಘ್ರ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಈಗಾಗಲೇ ಪರೇಶ್ ಮೇಸ್ತಾ ಹತ್ಯೆ ಸಂಬಂಧ ತನಿಖೆ ಚುರುಕುಗೊಳಿಸಿರುವ ತನಿಖಾಧಿಕಾರಿಗಳು, ಮತ್ತಿಬ್ಬರು ಶಂಕಿತ ಆರೋಪಿಗಳ ಮೇಲೆ ಶಂಕೆ ವ್ಯಕ್ತಪಡಿಸಿದ್ದು, ಇಬ್ಬರ ಬಂಧನಕ್ಕೂ ಬಲೆ ಬೀಸಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಪ್ರಕರಣ ಸಂಬಂಧ ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಕಳೆದ ಡಿಸೆಂಬರ್ ನಲ್ಲಿ ಆಜಾದ್ ಅಣ್ಣೀಗೇರಿ ಮತ್ತು ಫೆಬ್ರವರಿ 2ರಂದು ಶಿವಮೊಗ್ಗದ ಸಾಗರದಲ್ಲಿ ಜಿಮ್ ಸಲೀಂ ಎಂಬುವವರನ್ನು ಬಂಧಿಸಿದ್ದರು. ಈ ಪೈಕಿ ಜಿಮ್ ಸಲೀಂ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಈತನಿಂದಲೇ ಪ್ರಕರಣದ ಮತ್ತಷ್ಟು ಮಾಹಿತಿ ಬಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ್ ಪಾಟೀಲ್ ಅವರು, ಪರೇಶ್ ಮೇಸ್ತಾ ಸಾವಿನ ಬಳಿಕ ಕರಾವಳಿಯಲ್ಲಿ ಉಂಟಾಗಿದ್ದ ಗಲಭೆ ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದ್ದು, ಇನ್ನೂ ಮೂವರ ವಿರುದ್ಧ ಶಂಕೆ ಮೇರೆಗೆ ತನಿಖೆ ನಡೆಸಲಾಗುತ್ತಿದ್ದು, ಈ ವರೆಗೂ ಪರೇಶ್ ಮೇಸ್ತಾ ಮೃತದೇಹದ ಮರಣೋತ್ತರ ಪರೀಕ್ಷೆಯ ವರದಿ ಲಭ್ಯವಾಗಿಲ್ಲ. ಹೀಗಾಗಿ ತನಿಖೆ ಕೊಂಚ ತಡವಾಗಿದ್ದು, ವರದಿ ದೊರೆತ ಬಳಿಕ ತನಿಖೆ ಚುರುಕುಗೊಳ್ಳುತ್ತದೆ ಎಂದು ಹೇಳಿದ್ದಾರೆ.
ಇನ್ನು ಪರೇಶ್ ಮೇಸ್ತಾ ಸಾವಿನ ಬಳಿಕ ಪೊಲೀಸರು ಕೈಗೊಂಡಿದ್ದ ಕೆಲ ನಿರ್ಣಯಗಳು ಭಾರಿ ವಿವಾದಕ್ಕೆ ಕಾರಣವಾಗಿದ್ದವು. ಪ್ರಮುಖವಾಗಿ ಪರೇಶ್ ಮೇಸ್ತಾ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಖಾಸಗಿ ಆಸ್ಪತ್ರೆ ಕಸ್ತೂರಬಾ ವೈದ್ಯಕೀಯ ಕಾಲೇಜು, ಮಣಿಪಾಲದಲ್ಲಿ ನಡೆಸಿದ್ದು ಪ್ರಶ್ನಾರ್ಥಕವಾಗಿತ್ತು.