ಬಿಜೆಪಿ ಕಾರ್ಪೊರೇಟರ್ ರೇಖಾ ಮತ್ತು ಅವರ ಪತಿ ಕದಿರೇಶ್ (ಸಂಗ್ರಹ ಚಿತ್ರ)
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ 138ನೇ ವಾರ್ಡ್ ನ ಬಿಜೆಪಿ ಕಾರ್ಪೋರೇಟರ್ ರೇಖಾ ಅವರ ಪತಿ ಕದಿರೇಶನ್ ಅವರ ಕೊಲೆಗೆ ವೈಯಕ್ತಿಕ ದ್ವೇಷವೇ ಕಾರಣವಾಗಿರಬಹುದು ಎಂದು ಪೊಲೀಸರು ಪ್ರಾಥಮಿಕ ತನಿಖೆಯಿಂದ ತಿಳಿಸಿದ್ದಾರೆ.
ನಾಲ್ವರು ಪೊಲೀಸರ ತಂಡ ಕೊಲೆಗೆ ಕಾರಣವಾದ ಎಲ್ಲಾ ಅಂಶಗಳ ಕುರಿತು ತನಿಖೆ ನಡೆಸುತ್ತಿದ್ದು ಘಟನೆಯಲ್ಲಿ ಕದಿರೇಶ್ ಅವರ ಸಂಬಂಧಿ ವಿನಯ್ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಇವರಿಬ್ಬರ ನಡುವೆ ವೈಯಕ್ತಿಕ ದ್ವೇಷಗಳಿದ್ದವು ಎಂದು ಹೇಳಲಾಗಿದೆ.
ಕೆಲ ತಿಂಗಳ ಹಿಂದೆ ಕದಿರೇಶ್ ನ ಸಂಬಂಧಿಕ ವಿನಯ್ ಜೊತೆ ಪರಾರಿಯಾಗಿದ್ದ.
ಕದಿರೇಶ್ ಅವನನ್ನು ಹುಡುಕಿ ಕರೆತಂದಿದ್ದರು. ನಂತರ ವಿನಯ್ ಮನೆಗೆ ಕರೆದುಕೊಂಡು ಹೋಗಿ ಆತನ ಕುಟುಂಬದವರ ಎದುರು ಅವಮಾನಿಸಿ ಹಲ್ಲೆ ಮಾಡಿದ್ದರು ಎನ್ನಲಾಗಿದೆ.
ನಿನ್ನೆ ಕದಿರೇಶ್ ಸೋದರ ಸುರೇಶ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ, ವಿನಯ್ ತಮ್ಮ ಸೋದರನನ್ನು ಕೊಂದಿದ್ದಾನೆ ಎಂದಿದ್ದಾರೆ. ಹೀಗಾಗಿ ಈ ಪ್ರಕರಣ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಶಂಕಿಸಲಾಗಿದೆ ಎನ್ನುತ್ತಾರೆ ಪೊಲೀಸರು.
ಈ ಮಧ್ಯೆ ಪೊಲೀಸರು ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿನ್ನೆ ಕೆಲವರನ್ನು ವಿಚಾರಣೆ ನಡೆಸಿದೆ.
ಕದಿರೇಶ್ ತಮ್ಮ ಸಂಬಂಧಿಕರ ಜೊತೆ ಯಾವುದಾದರೂ ಹಣಕಾಸಿಗೆ ಸಂಬಂಧಪಟ್ಟ ವಿವಾದ ಹೊಂದಿದ್ದರೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.