ರಾಜ್ಯ

ಕರ್ನಾಟಕ ಹೈಕೋರ್ಟ್'ಗೆ 5 ಹೊಸ ನ್ಯಾಯಾಧೀಶರು

Manjula VN
ಬೆಂಗಳೂರು: ಕರ್ನಾಟಕ ಹೈಕೋರ್ಟ್'ಗೆ ನ್ಯಾಯಮೂರ್ತಿಗಳನ್ನು ನೇಮಕ ಮಾಡುವಂತೆ ವಕೀಲರು ಉಪವಾಸ ಸತ್ಯಾಗ್ರಹವನ್ನು ನಡೆಸಿ, ಕೇಂದ್ರ ಸರ್ಕಾರದ ಆದೇಶದ ಬಳಿಕ ಸತ್ಯಾಗ್ರಹವನ್ನು ಹಿಂಪಡೆದ ಬೆನ್ನಲ್ಲೇ ಐವರು ನ್ಯಾಯಾಧೀಶರ ನೇಮಕಕ್ಕೆ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಯಲಯ ಒಪ್ಪಿಗೆ ನೀಡಿದೆ ಎಂದು ತಿಳಿದುಬಂದಿದೆ. 
ವಕೀಲರಾಗಿದ್ದ ಕೃಷ್ಣ ದೀಕ್ಷಿತ್ ಶ್ರೀಪಾದ, ಶಂಕರ ಗಣಪತಿ ಪಂಡಿತ್, ರಾಮಕೃಷ್ಣ ದೇವದಾಸ್, ಭೂತನಹೊಸೂರು ಮಲ್ಲಿಕಾರ್ಜುನ ಶ್ಯಾಮಪ್ರಸಾದ್, ಸಿದ್ದಪ್ಪ ಸುನೀಲ್ ದತ್ ಯಾದವ್ ಅವರಿಗೆ ರಾಜ್ಯ ಹೈಕೋರ್ಟ್'ಗೆ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಪದೋನ್ನತಿ ನೀಡಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಆದೇಶ ಹೊರಡಿಸಿದ್ದಾರೆ. 
ಈ ಆದೇಶವನ್ನು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ಬಿಡುಗಡೆಗೊಳಿಸಿದೆ. ಈ ಐವರು ನ್ಯಾಯಬೂರ್ತಿಗಳು ಬುಧವಾರ (ಫೆ.14) ಅಥವಾ ಶನಿವಾರ (ಫೆ.17)ರಂದು ಅಧಿಕಾರ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. 
ಈ ಐವರ ಹೆಸರುಗಳನ್ನು ನ್ಯಾಯಮೂರ್ತಿಗಳ ಹುದ್ದೆಗೆ ನೇಮಕ ಮಾಡಲು ಕರ್ನಾಟಕ ಹೈಕೋರ್ಟ್ ಕೊಲಿಜಿಯಂ ಸುಪ್ರೀಂಕೋರ್ಟ್'ಗೆ ಶಿಫಾರಸು ಮಾಡಿತ್ತು. ತದನಂತರ ಈ ಪ್ರಸ್ತಾವನೆಯನ್ನು ಸುಪ್ರೀಂಕೋರ್ಟ್'ಗೆ ಕೇಂದ್ರ ಕಾನೂನು ಇಲಾಖೆಗೆ ಶಿಫಾರಸು ಮಾಡಿತ್ತು. ಅದರಂತೆ ಇದೇ ಫೆ.6 ರಂದು ಕಾನೂನು ಇಲಾಖೆಯು ಐವರನ್ನು ನ್ಯಾಯಮೂರ್ತಿಗಳ ಹುದ್ದೆಗೆ ನೇಮಕ ಮಾಡಲು ಸಮ್ಮತಿಸಿ, ಅಂಕಿತ ಹಾಕಲು ರಾಷ್ಟ್ರಪತಿಗಳಿಗೆ ಕಳುಹಿಸಿಕೊಟ್ಟಿತ್ತು. 
SCROLL FOR NEXT