ರಾಜ್ಯ

ಮಹಾಮಸ್ತಕಾಭಿಷೇಕ: ಶ್ರವಣಬೆಳಗೊಳದಲ್ಲಿ ಮನೆ, ರೂಂಗಳ ಬಾಡಿಗೆ ಗಗನಕ್ಕೆ

Srinivasamurthy VN
ಹಾಸನ: ಹಾಸನದ ಚೆನ್ನರಾಯಪಟ್ಟಣದ ಶ್ರವಣಬೆಳಗೊಳದಲ್ಲಿ ಮನೆ ಮತ್ತು ರೂ ಬಾಡಿಗೆಗಳು ಗಗನಕ್ಕೇರಿದ್ದು, ದಿನವೊಂದಕ್ಕೆ ಬರೊಬ್ಬರಿ 1, 500 ಬಾಡಿಗೆ ಪಡೆಯಲಾಗುತ್ತಿದೆಯಂತೆ..
ಹೌದು.. 12 ವರ್ಷಗಳಿಗೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕ ವೀಕ್ಷಣೆಗಾಗಿ ದೇಶ ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಮತ್ತು ಭಕ್ತರು ಶ್ರವಣಬೆಳಗೊಳಕ್ಕೆ ಆಗಮಿಸುತ್ತಿದ್ದು, ಪ್ರವಾಸಿಗರು ಉಳಿದುಕೊಳ್ಳಲು ಕೊಠಡಿ ಸಿಗದೇ  ಪರಾದಾಡುತ್ತಿದ್ದಾರೆ. ಏತನ್ಮಧ್ಯೆ ಇದನ್ನೇ ಬಂಡವಾಳವಾಗಿಸಿಕೊಂಡಿರುವ ಸ್ಥಳೀಯ ನಿವಾಸಿಗಳು ಮನೆ ಬಾಡಿಗೆ ಮತ್ತು ರೂಂಗಳ ಬಾಡಿಗೆಯನ್ನು ಏರಿಕೆ ಮಾಡಿದ್ದು, ಪ್ರವಾಸಿಗರು ಅನಿವಾರ್ಯವಾಗಿ ದುಬಾರಿ ಹಣ ನೀಡಿ ಮನೆ  ಮತ್ತು ರೂಂ ಬಾಡಿಗೆ ಪಡೆಯುವಂತಾಗಿದೆ.
ಮಹಾಮಸ್ತಕಾಭಿಷೇಕ ಸುಮಾರು ಒಂದು ತಿಂಗಳ ಕಾಲ ನಡೆಯಲಿದ್ದು, ಈಗಾಗಲೇ ಶ್ರವಣಬೆಳಗೊಳ ಸುತ್ತಮುತ್ತಲ ಪ್ರದೇಶದಲ್ಲಿ ರೂಂಗಳು ಮತ್ತು ಖಾಲಿ ಮನೆಗಳು ಭರ್ತಿಯಾಗಿವೆ, ಹೀಗಿದ್ದೂ ಅಳಿದುಳಿದ ಮನೆ ಮತ್ತು ರೂಂ  ಮಾಲೀಕರು ದುಬಾರಿ ಬಾಡಿಗೆಗೆ ಬೇಡಿಕೆ ಇಡುತ್ತಿದ್ದು, ದಿನವೊಂದಕ್ಕೆ 1500 ರು. ಕೇಳಲಾಗುತ್ತಿದೆಯಂತೆ. 
ಶ್ರವಣ ಬೆಳಗೊಳ ಪ್ರಮುಖವಾಗಿ ಜೈನರ ಪವಿತ್ರ ಸ್ಥಳವಾಗಿದ್ದು, ಉತ್ತರ ಭಾರತದಿಂದ ಲಕ್ಷಾಂತರ ಮಂದಿ ಪ್ರವಾಸಿಗರು ಆಗಮಿಸುತ್ತಿದ್ದಾರೆ.  ಹೀಗಾಗಿ ಇಲ್ಲಿನ ಸ್ಥಳೀಯರು ತಮ್ಮ ಮನೆ ಬಾಡಿಗೆ ಹೆಚ್ಚಳ ಮಾಡಿದ್ದು, ಶ್ರವಣ  ಬೆಳಗೊಳದ ತ್ಯಾಗಿ ನಗರದಲ್ಲಿ ಜೈನ ಧರ್ಮಗುರುಗಳು ಮತ್ತು ನನ್ ಗಳು ಉಳಿದುಕೊಂಡಿರುವ ಒಂದು ಮನೆಗೆ ಒಂದು ತಿಂಗಳಿಗೆ ಬರೊಬ್ಬರಿ 2.5ಲಕ್ಷ ರು.ಬಾಡಿಗೆ ನೀಡಲಾಗುತ್ತಿದೆಯಂತೆ. ಈ ಮನೆಯಲ್ಲಿ ಒಟ್ಟು 8 ಮಂದಿ  ತಂಗಿದ್ದಾರೆ ಎನ್ನಲಾಗಿದೆ. ಶ್ರವಣಬೆಳಗೊಳದಲ್ಲಿ ಇಂತಹ ಹತ್ತಾರು ಮನೆಗಳಿದ್ದು, ಇಲ್ಲಿ ನೆಲೆಸಿರುವವರು ದುಬಾರಿ ಹಣ ನೀಡಿ ಮನೆಗಳನ್ನು ಬಾಡಿಗೆಗೆ ಪಡೆದಿದ್ದಾರೆ. 
ಇಷ್ಟಾದರೂ ಪ್ರವಾಸಿಗರು ಉಳಿದುಕೊಳ್ಳಲು ರೂಂಗಳ ಕೊರತೆ ಇದ್ದು, ಕೆಲವರಂತೂ ತಮ್ಮ ಮನೆಗಳ ಮೇಲ್ಛಾವಣಿಯಲ್ಲಿ ತಾತ್ಕಾಲಿಕ ಶೆಡ್ ಗಳನ್ನು ನಿರ್ಮಿಸಿ ಬಾಡಿಗೆಗೆ ನೀಡುತ್ತಿದ್ದಾರೆ. ಮತ್ತೆ ಕೆಲ ನಿವಾಸಿಗಳು ತಾವಿರುವ  ಮನೆಯನ್ನೇ ಖಾಲಿ ಮಾಡಿ ಪ್ರವಾಸಿಗರಿಗೆ ಬಾಡಿಗೆಗೆ ನೀಡಿ ದುಬಾರಿ ಬಾಡಿಗೆ ಪಡೆಯುತ್ತಿದ್ದಾರೆ. ಶ್ರವಣಬೆಳಗೊಳದಿಂದ 12 ಕಿ.ಮೀ ದೂರದಲ್ಲಿರುವ ಚೆನ್ನರಾಯಪಟ್ಟಣದಲ್ಲೂ ಮನೆಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು, ತಿಂಗಳಿಗೆ  15ರಿಂದ 20 ಸಾವಿರ ಬಾಡಿಗೆ ಕೇಳಲಾಗುತ್ತಿದೆಯಂತೆ.
ಒಟ್ಟಾರೆ 12 ವರ್ಷಗಳಿಗೊಮ್ಮೆ ನಡೆಯುವ ಮಹಾಮಸ್ತಾಕಾಭಿಷೇಕ ಇಲ್ಲಿನ ಸ್ಥಳೀಯ ನಿವಾಸಿಗಳಿಗೆ ಜಾಕ್ ಪಾಟ್ ಹೊಡೆಸಿದಂತಿದೆ.
SCROLL FOR NEXT