ಬೆಂಗಳೂರು: ಕಾವೇರಿ ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಮಾಂಸಕ್ಕಾಗಿ ಜಿಂಕೆಯಂತಹ ಪ್ರಾಣಿಗಳನ್ನು ಭೇಟಿಯಾಡಿ ಕೊಲುತ್ತಿದ್ದ ಆರು ಮಂದಿ ಹಂತಕರನ್ನು ಹಲಗೂರು ವಲಯದ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.
ರಾಜು (38) ಬೆಟ್ಟಗೌಡನದೊಡ್ಡಿ, ಚೆಲುವರಾಜ್ (30) ಕನಕಪುರ, ಮಾದೇಗೌಡ (63) ಜಗದೀಶ್, ರಮೇಶ್, ಮತ್ತು ಗಿರೀಶ್ ಬಂಧಿತ ಆರೋಪಿಗಳು. ಇವರೆಲ್ಲರೂ ಮಳವಳ್ಳಿ ತಾಲೂಕು ಬ್ಯಾಡರಹಳ್ಳಿಯ ನಿವಾಸಿಗಳಾಗಿದ್ದಾರೆ. ಬಂಧಿತರಿಂದ ಮೂರು ಬಂದೂಕು, ಎರಡು ವಾಹನ, ಬ್ಯಾಟರಿಯನ್ನು ವಶಪಡಿಸಿಕೊಳ್ಳಲಾಗಿದೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆ ಮತ್ತು ಭಾರತೀಯ ಸಶಸ್ತ್ರ ಕಾಯ್ದೆ ಅನ್ವಯ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾವೇರಿ ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಭೇಟಿಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಬಂಧಿತರಿಗೆ ಜಾಮೀನು ನೀಡಬಾರದು, ಕಠಿಣ ಶಿಕ್ಷೆಗೊಳಪಡಿಸಬೇಕೆಂದು ವನ್ಯಜೀವಿ ಹೋರಾಟಗಾರರ ಶಂಕರ್ ಒತ್ತಾಯಿಸಿದ್ದಾರೆ.
ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಆನೆ, ಜಿಂಕೆಯಂತಹ ವನ್ಯಜೀವಿಗಳ ಭೇಟಿ ಕಳೆದೊಂದು ದಶಕದಿಂದಲೂ ನಿರಂತರವಾಗಿ ನಡೆಯುತ್ತಲೇ ಬಂದಿದ್ದು, ಭೇಟಿಯಾಡಿದ್ದ ನಂತರ ಕಳ್ಳ ಮಾಂಸ ಬೇಟೆಗಾರರು ನೆರೆಯ ತಮಿಳುನಾಡಿನಿಂದ ಪರಾರಿಯಾಗುತ್ತಿದ್ದರು.