ರಾಜ್ಯ

ಟೆಕ್ಕಿ ನಾಪತ್ತೆ: ಸಿಮ್ ಕಾರ್ಡ್ ವಿತರಕರ ಬಂಧನ, ಶಂಕಿತ ಆರೋಪಿಗಳ ರೇಖಾಚಿತ್ರ ಬಿಡುಗಡೆ

Raghavendra Adiga
ಬೆಂಗಳೂರು: ಓಎಲ್ ಎಕ್ಸ್ ನಲ್ಲಿ ಕಾರು ಮಾರಾಟಕ್ಕೆ ಜಾಹೀರಾತು ನೀಡಿದ್ದ ಟೆಕ್ಕಿ ಕುಮಾರ್ ಅಜಿತಾಬ್ ನ ನಾಪತ್ತೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ ಐಟಿ) ಕಾರ್ ಖರೀದಿಸುವುದಾಗಿ ಅಜಿತಾಬ್ ನನ್ನು ಕರೆಸಿಕೊಂಡಿದ್ದ ಶಂಕಿತ ವ್ಯಕ್ತಿಗಳ ರೇಕಾಚಿತ್ರವನ್ನು ಬಿಡುಗಡೆ ಮಾಡಿದೆ.
ನಕಲಿ ದಾಖಲೆಗಳನ್ನು ನೀಡಿ ಸಿಮ್ ಖರೀದಿಸಿದ್ದ ಶಂಕಿತರಿಗೆ ಸಿಮ್ ಮಾರಾಟ ಮಾಡಿದ್ದ ಜಿಯೋ ಸಿಮ್ ಕಾರ್ಡ್ ಮಾರಾಟಗಾರರಿಬ್ಬರನ್ನು ಪೋಲೀಸರು ಬಂಧಿಸಿದ್ದು ಅವರು ನೀಡಿದ ವಿವರಗಳ ಆಧಾರದಲ್ಲಿ ಈ ರೇಖಾಚಿತ್ರ ತಯಾರಾಗಿದೆ. 
ಆದರೆ ಈ ರೇಖಾಚಿತ್ರವು ಶಂಕಿತ ವ್ಯಕ್ತಿಗಳದೆ ಎನ್ನುವುದರ ಬಗೆಗೆ ಪೋಲೀಸರಿಗೆ ಇನ್ನೂ ಶಂಕೆ ಇದ್ದು ಬಂಧಿತರಾದ ಇಬ್ಬರು ಸಿಮ್ ಮಾರಾಟಗಾರರು ಒಬ್ಬನೇ ಶಂಕಿತ ವ್ಯಕ್ತಿಯ ಮುಖಚರ್ಯೆಯ ವಿವರಗಳನ್ನು ಬೇರೆ ಬೇರೆ ರೀತಿಯಲ್ಲಿ ವಿವರಿಸುತ್ತಿದ್ದಾರೆ. ಟೆಕ್ಕಿ ನಾಪತ್ತೆ ಪ್ರಕರಣಕ್ಕೆ ಕಾರಣವಾಗಿದ್ದ ಆರೋಪಿಗಳಿಗೆ ಸಿಮ್ ಕಾರ್ಡ್ ಮಾರಾಟ ಮಾಡಿದ್ದ ರಿಲಯನ್ಸ್ ಜಿಯೋ ಮಾರಾಟಗಾರ ಹಾಗೂ ಓರ್ವ ಏಜೆಂಟರನ್ನು ಬೆಂಗಳೂರು ವೈಟ್ ಫೀಲ್ಡ್ ಪೋಲೀಸರು ಬಂಧಿಸಿದ್ದಾರೆ. ಮಾರಾಟಗಾರ ಆನಂದ್ ಹಾಗೂ ಶಿವಕುಮಾರ್ ಎನ್ನುವ ಏಜೆಂಟ್ ನನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ. ಇದಲ್ಲದೆ ಸಿಮ್ ಕಾರ್ಡ್ ಖರೀದಿಸಿದಾತ ನಿಡಿದ್ದ ವಿವರದಂತೆ ಕೋಲಾರದ ರಹಮತ್ ನಗರ ನಿವಾಸಿ ಶಬಾನಾ ಅವರ ವಿರುದ್ಧ ಸಹ ಪೋಲೀಸರು ತನಿಖೆ ಕೈಗೊಂಡಿದ್ದಾರೆ.
ಶಬಾನಾ ಅವರನ್ನು ಪ್ರಶ್ನಿಸಿದಾಗ, ಆಕೆಗೆ ಈ ಪ್ರಕರಣದ ಕುರಿತಂತೆ ಯಾವುದೇ ವಿವರ ತಿಳಿದಿಲ್ಲ ಎಂದು ಅವರು ಹೇಳಿದರು. ಶಬಾನಾ ಶಿವಕುಮಾರ್ ನಿಂದ ಸಿಮ್ ಖರೀದಿ ಮಾಡಿದ ಕೆಲ ದಿನಗಳಲ್ಲಿ ಸಿಮ್ ಕಾರ್ಡ್ ನಿಷ್ಕ್ರಿಯವಾಗಿದೆ. ಶಿವಕುಮಾರ್ ನನ್ನು ಪತ್ತೆಹಚ್ಚಿದ ಪೋಲೀಸರು ಶಬಾನಾ ಹೆಸರಿನಲ್ಲಿಯೇ ಮತ್ತೊಂದು ಸಿಮ್ ಕಾರ್ಡ್ ನ್ನು ಆರೋಪಿಗಳಿಗೆ ಮಾರಾಟ ಮಾಡಿರುವುದು ತಿಳಿದಿದೆ. ಆನಂದ್ ಸಿಮ್ ಕಾರ್ಡ್ ಅನ್ನು ರೀಚಾರ್ಜ್ ಮಾಡಿ ಕೊಟ್ಟಿದ್ದಾರೆ. ಶಬಾನಾ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಈ ಇಬ್ಬರೂ ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಪೋಲೀಸರು ಹೇಳಿದರು.
ಡಿ.18, 2017ರಿಂದ ಸಾಫ್ಟ್ ವೇರ್ ಇಂಜಿನಿಯರ್ ಕುಮಾರ್ ಅಜಿತಾಬ್ ಕಾಣೆಯಾಗಿದ್ದಾರೆ.
SCROLL FOR NEXT