ಬೆಂಗಳೂರು: ಪ್ರತಿಷ್ಠಿತ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಪಿಜಿ ಸೀಟು ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರುಪಾಯಿ ವಂಚನೆ ಮಾಡಿದ್ದ ಇಬ್ಬರನ್ನು ಮೈಕೋ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ರಜತ್ ಶೆಟ್ಟಿ ಹಾಗೂ ಜಯಪ್ರಕಾಶ್ ಶೆಟ್ಟಿ ಎಂದು ಗುರುತಿಸಲಾಗಿದೆ. ಅವರಿಂದ 32 ಲಕ್ಷ ರುಪಾಯಿ ನಗದು ಮತ್ತು 50 ಲಕ್ಷ ರುಪಾಯಿ ಫಿಕ್ಸೆಡ್ ಡಿಪಾಸಿಟ್ ದಾಖಲೆಯನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆ ಬಂಧಿತರಿಂದ 1.03 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆಡಿದ್ದಾರೆ.
ರಜತ್ ಶೆಟ್ಟಿ ಮತ್ತು ಜಯಪ್ರಕಾಶ್ ಶೆಟ್ಟಿ ಅವರು ಬಿಟಿಎಂ ಲೇಔಟ್ ನಲ್ಲಿ ಗ್ಲೋಬಲ್ ಲರ್ನಿಂಗ್ ಅಂಡ್ ಎಜುಕೇಷನ್ ಕನ್ಸ್ಲ್ಟೆನ್ಸಿ ಕಚೇರಿ ತೆರೆದಿದ್ದರು. ಇದೇ ರೀತಿ ನಗರದ ವಿವಿಧೆಡೆ ಜೆಪಿ ಕನ್ಸ್ಲ್ಟೆನ್ಸಿ, ಎಜೆಎ ಇನ್ಫ್ರಾಸ್ಟ್ರಕ್ಚರ್, ನಾರಾಯಣ ಕನ್ಸ್ಲ್ಟೆನ್ಸಿ ಹಾಗೂ ಐಆರ್ಎಸ್ ಕನ್ಸ್ಲ್ಟೆನ್ಸಿ ಹೆಸರಿನಲ್ಲಿ ಕಚೇರಿ ತೆರೆದಿದ್ದರು.
ಆರೋಪಿಗಳು ವಂಚನೆಯಿಂದ ಬಂದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರು. ವಿದೇಶ ಪ್ರವಾಸ, ಮೋಜು ಮಸ್ತಿಯಲ್ಲಿ ತೊಡಗುತ್ತಿದ್ದರು. ಜತೆಗೆ ಇವರು ಫ್ಲ್ಯಾಟ್ ಖರೀದಿಸಿದ್ದರು. ವಿವಿಧ ಕಂಪನಿಗಳಲ್ಲಿ 12.5 ಲಕ್ಷ ರುಪಾಯಿ ಹಣವನ್ನು ಷೇರುಗಳಲ್ಲಿ ಹೂಡಿಕೆ ಮಾಡಿರುವುದು ತನಿಖೆಯಿಂದ ಬಯಲಾಗಿದೆ.
ಬಂಧಿತರ ವಿರುದ್ಧ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ.