ರಾಜ್ಯ

ಬೆಂಗಳೂರು: ಶಾಲಾ ವಿದ್ಯಾರ್ಥಿಗಳ ದುರ್ಬಳಕೆ, ಮುಖ್ಯ ಶಿಕ್ಷಕಿ ಅಮಾನತು

Raghavendra Adiga
ಬೆಂಗಳೂರು: ಮಕ್ಕಳಿಗೆ ಮಾನಸಿಕ ಹಾಗೂ ದೈಕಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರು ಲಕ್ಕಸಂದ್ರ ಬಿಬಿಎಂಪಿ ಶಾಲಾ ಮುಖ್ಯೋಪಾದ್ಯಾಯಿನಿಯನ್ನು ಅಮಾನತುಗೊಳಿಸಲಾಗಿದೆ.
ಮೇಲ್ನೋಟಕ್ಕೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮುಖ್ಯೋಪಾದ್ಯಾಯಿನಿ ಸುಲೋಚನಾ ಅವರನ್ನು ಬಿಬಿಎಂಪಿ ಕಮಿಷನರ್ ಅಮಾನತುಗೊಳಿಸಿದ್ದಾರೆ. ಮಕ್ಕಳ ಹಕ್ಕುಗಳ ಕಾರ್ಯಕರ್ತರು ಮತ್ತು ಮಕ್ಕಳ ಸಹಾಯವಾಣಿ ಅಧಿಕಾರಿಗಳು ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ಕಮೀಷನರ್ ಈ ಕ್ರಮ ಕೈಗೊಂಡಿದ್ದಾರೆ.
ಸುಲೋಚನಾ ತನ್ನ ಮನೆಗೆಲಸಗಳನ್ನು ಮಾಡಲು ವಿದ್ಯಾರ್ಥಿಗಳನ್ನು ನೇಮಿಸಿಕೊಳ್ಳುತ್ತಿದ್ದರು, ಯಾರು ಮನೆಗೆಲಸ ಮಾಡಲು ನಿರಾಕರಿಸಿದರೆ ಅವರಿಗೆ ಹೊಡೆಯುತ್ತಿದ್ದರು.  ಶಾಲಾ ಸಮಯದಲ್ಲಿ ಆಕೆಯ ಕಾಲುಗಳನ್ನು ಮಸಾಜ್ ಮಾಡಲು ಕೇಳುವ ಮೂಲಕ ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದರೆಂದು ದೂರಿನಲ್ಲಿ ಹೇಳಲಾಗಿದೆ.
"ವಿದ್ಯಾರ್ಥಿಗಳನ್ನು ಬಳಸಿಕೊಳ್ಳುವ ಮುಖ್ಯೋಪಾಧ್ಯಾಯರ ವೀಡಿಯೊ ದೃಶ್ಯಾವಳಿಗಳನ್ನು ಅನ್ನು ನಾವು ತೆಗೆದುಕೊಂಡಿದ್ದೇವೆ. ದೂರು ಸಲ್ಲಿಸುವ ಮುನ್ನ ನಮ್ಮ ತಂಡವು ಶಾಲೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದೆ. ಮಕ್ಕಳ ಶೋಷಣೆ ನಡೆಯುತ್ತಿರುವುದು ಖಾತರಿಗೊಂಡ ನಂತರ, ವಿದ್ಯಾರ್ಥಿಗಳೊಡನೆ ಆಪ್ತ ಸಮಾಲೋಚನೆಯನ್ನು ಸಹ ನಾವು ನಡೆಸಿದ್ದೇವೆ. ವಿದ್ಯಾರ್ಥಿಗಳು ತಿಳಿಸಿದಂತೆ, ಮುಖ್ಯೋಪಾದ್ಯಾಯಿನಿ ಅವರನ್ನು ಬಟ್ಟೆಗಳನ್ನು ಕಳಚಲು ಹೇಳುತ್ತಿದ್ದಳಲ್ಲದೆ ಅವರ ಅರೆ ಬೆತ್ತಲೆ ದೇಹದ ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದಳು" ಚೈಲ್ಡ್ ಲೈನ್ ನೊಡನೆ ಕಾರ್ಯನಿರ್ವಹಿಸುವ ಮಕ್ಕಳಹಕ್ಕು ಕಾರ್ಯಕರ್ತರು ಹೇಳಿದ್ದಾರೆ.
ಕೆಲವು ವಾರಗಳ ಹಿಂದೆ ಚೈಲ್ಡ್ ಲೈನ್ ನಲ್ಲಿ ದಾಖಲಾದ ದೂರನ್ನು ಆಧರಿಸಿ ನಾವು ಕ್ರಮ ತೆಗೆದುಕೊಂಡಿದ್ದೇವೆ.  ಸಮಸ್ಯೆಯನ್ನು ಪರಿಶೀಲಿಸಲು ನಮ್ಮ ತಂಡವು ಶಾಲೆಗೆ ಭೇಟಿ ನೀಡಿದೆ. ತಂಡದ ಭೇಟಿಯ ಸಮಯದಲ್ಲಿ, ಮುಖ್ಯೋಪಾದ್ಯಾಯಿನಿಯು ಮಕ್ಕಳನ್ನು ತಮ್ಮ ಸ್ವಂತ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದದ್ದು ಸ್ಪಷ್ಟವಾಗಿ ಕಾಣಿಸಿದೆ. ತಮ್ಮ ಮನೆಯ ಬಟ್ಟೆ, ಪಾತ್ರೆಗಳನ್ನು ತೊಳೆದುಕೊಡುವುದು, ಅಡುಗೆ ಕೆಲಸ ಹೀಗೆ ನಾನಾ ವಿಧದ ಮನೆಗೆಲಸಕ್ಕೆ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುತ್ತಿದ್ದದ್ದು ಕಂಡುಬಂದಿದೆ. ಇದು ಮಕ್ಕಳ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು, ಇದಕ್ಕಾಗಿ ಆಕೆ ಶಿಕ್ಷೆಗೊಳಗಾಗಲೇ ಬೇಕು." ಮಕ್ಕಳ ಹಕ್ಕುಗಳ ಕಾರ್ಯಕರ್ತ ನಾಗಾಸಿಂಹಾ ಜಿ ರಾವ್ ಹೇಳಿದರು. 
ಪ್ರಕರಣದ  ವರದಿಯ ಆಧಾರದ ಮೇಲೆ ತನಿಖೆ ನಡೆಸಲಾಗುವುದು ಮತ್ತು ಸುಲೋಚನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
SCROLL FOR NEXT