ಬೆಂಗಳೂರು ಮೆಟ್ರೊಗೆ ಹಸ್ತಾಂತರಿಸಿದ ಕಾರು. ಪ್ರತಿ 6 ಕಾರುಗಳ ಮೆಟ್ರೊ ರೈಲು ಕನಿಷ್ಠ 1,950 ಪ್ರಯಾಣಿಕರನ್ನು ಕರೆದೊಯ್ಯುತ್ತದೆ.
ಬೆಂಗಳೂರು: ಕೆಲವು ರೈಲುಗಳಲ್ಲಿ ಲೋಕೋ-ಪೈಲಟ್ ಕ್ಯಾಬಿನ್ ನ ಹಿಂದಿನ ಮೊದಲ ಎರಡು ಬಾಗಿಲುಗಳಲ್ಲಿ ಆಗಮನ ಮತ್ತು ನಿರ್ಗಮನಕ್ಕೆ ಮಾರ್ಚ್ 1ರಿಂದ ಮಹಿಳೆಯರಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮೊದಲ ಆರು ಕಾರು ಮೆಟ್ರೊ ರೈಲನ್ನು ಸಿದ್ದಗೊಳಿಸಲು ಬಳಸಲಾದ ಮೊದಲ ಮೂರು ಇಂಟರ್ ಮೀಡಿಯೇಟ್ ಕಾರುಗಳನ್ನು ಅಧಿಕೃತವಾಗಿ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ನಿನ್ನೆ ಮಾತನಾಡಿದ ಮಹೇಂದ್ರ ಜೈನ್, ಹಸಿರು ರೇಖೆ ಮತ್ತು ನೇರಳೆ ರೇಖೆಯ ಕೆಲವು ರೈಲುಗಳ ಬೋಗಿಗಳಲ್ಲಿ ನಾಲ್ಕರಲ್ಲಿ ಎರಡು ಬಾಗಿಲುಗಳನ್ನು ಮಹಿಳೆಯರಿಗೆ ಮಾತ್ರ ಬಳಸಲು ಅವಕಾಶ ನೀಡಲಾಗುವುದು. ಜನರಿಂದ ಬರುವ ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ದಿನಗಳಲ್ಲಿ ಎಲ್ಲಾ ರೈಲುಗಳಿಗೆ ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಮೆಟ್ರೊ ರೈಲುಗಳಲ್ಲಿ 6 ಬೋಗಿಗಳನ್ನು ಅಳವಡಿಸಿದ ನಂತರ ಎಲ್ಲಾ ರೈಲುಗಳಲ್ಲಿ ಮೊದಲ ಬೋಗಿಯನ್ನು ಮಹಿಳೆಯರಿಗೆ ಮಾತ್ರ ಮೀಸಲು ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಹೇಳಿದರು.
ಏಜೆನ್ಸ್-ಫ್ರಾಂಕೈಸ್ ಡಿ ಡೆವೆಲಪ್ ಮೆಂಟ್ ನಿಧಿ ಯೋಜನೆ ಮೂಲಕ 150 ಬೋಗಿಗಳನ್ನು ಮೆಟ್ರೊ ರೈಲಿಗೆ ಒದಗಿಸಲು ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಬೆಂಗಳೂರು ಮೆಟ್ರೊ ರೈಲು ನಿಗಮ 1,421 ಕೋಟಿ ರೂಪಾಯಿಗಳ ಒಪ್ಪಂದವನ್ನು ಬೆಮೆಲ್ ಜೊತೆಗೆ ಮಾಡಿಕೊಂಡಿತ್ತು. ಎಲ್ಲಾ ಬೋಗಿಗಳನ್ನು ಒದಗಿಸಲು ಕಾಲಮಿತಿ ನಿಗದಿಪಡಿಸಿರುವ ಕುರಿತು ಮಾತನಾಡಿದ ಮಹೇಂದ್ರ ಜೈನ್, ಬೋಗಿಗಳನ್ನು ಒಗ್ಗೂಡಿಸುವುದು ಮತ್ತು ಪ್ರಯೋಗಗಳು ಎರಡು ತಿಂಗಳಲ್ಲಿ ನಡೆಯುತ್ತವೆ. ಒಂದು ಬಾರಿ ಪ್ರಮಾಣೀಕರಣವಾದ ಮೇಲೆ ಪೂರ್ಣಪ್ರಮಾಣದ ಉತ್ಪಾದನೆ ಆರಂಭವಾಗಲಿದೆ.
ಜೂನ್ ನಿಂದ ಆಗಸ್ಟ್ ವರೆಗೆ ಪ್ರತಿ ತಿಂಗಳು 6 ಬೋಗಿಗಳನ್ನು ಪಡೆದು ಸೆಪ್ಟೆಂಬರ್ ತಿಂಗಳಲ್ಲಿ 9 ಬೋಗಿಗಳಿಗೆ ಹಾಗೂ ಅಕ್ಟೋಬರ್ ತಿಂಗಳಲ್ಲಿ 12 ಬೋಗಿಗಳಿಗೆ ಏರಿಕೆಯಾಗಲಿದೆ. 2019 ಜೂನ್ ವೇಳೆಗೆ ಎಲ್ಲಾ 150 ಬೋಗಿಗಳನ್ನು ಒದಗಿಸಲಾಗುತ್ತದೆ ಎಂದು ಹೇಳಿದರು.
ಏಪ್ರಿಲ್ ಕೊನೆ ಅಥವಾ ಮೇ ವೇಳೆಗೆ ಆರು ಕಾರು ರೈಲು ಸಂಚಾರ ಆರಂಭವಾಗಲಿದೆ. ಬೆಮೆಲ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಅಧ್ಯಕ್ಷ ಡಿ.ಕೆ.ಹೋಟ, ಮೂರು ಮೆಟ್ರೊ ಕಾರು ಘಟಕಗಳನ್ನು ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ ಹಸ್ತಾಂತರಿಸಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos