ರಾಜ್ಯ

ಮಹಾಮಸ್ತಕಾಭಿಷೇಕ: ಮದ್ರಾಸ್ ಗೆ ವರದಿ ಕೊಂಡೊಯ್ಯುತ್ತಿದ್ದ ಪಾರಿವಾಳಗಳು!

Shilpa D
ಶ್ರವಣಬೆಳಗೊಳ: 12 ವರ್ಷಕ್ಕೊಮ್ಮೆ ನಡೆಯುವ ಶ್ರವಣಬೆಳಗೊಳದ ಗೊಮ್ಮಟೇಶ್ವರ ಮೂರ್ತಿಯ ಮಹಾ ಮಜ್ಜನಕ್ಕೆ ಕೆಲವೇ ಗಂಟೆಗಳು ಬಾಕಿಯಿದ್ದು, ವಿಶ್ವದ ಹಲವು ಮಾಧ್ಯಮಗಳು ಈ ಅಪೂರ್ವ ಕಾರ್ಯಕ್ರಮವನ್ನು ಸೆರೆಹಿಡಿಯಲು ಆಗಮಿಸಿವೆ. 
ಫೆಬ್ರವರಿ 17ರ ಮಧ್ಯಾಹ್ನದಿಂದ ವಿವಿಧ ಚಾನೆಲ್ ಗಳು ಹಾಗೂ ವೆಬ್ ಸೈಟ್ ಗಳು ಮಹಾಮಸ್ತಕಾಭಿಷೇಕದ ನೇರ ಪ್ರಸಾರ ಮಾಡಲಿವೆ. ಇತ್ತೀಚಿನ ದಶಕಗಳಲ್ಲಿ ಅಂದರೆ ಮಾಧ್ಯಮಗಳು ಆಗಮಿಸಿದ ಮೇಲೆ ಪ್ರಪಂಚದ ಯಾವುದೇ ಭಾಗದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳನ್ನು ಕುಳಿತಲ್ಲಿಯೇ ನೋಡಿ ಆನಂದ ಪಡುವ ಸೌಲಭ್ಯ ದೊರೆತಿದೆ. ಹಾಗೆ ಮಹಾ ಮಸ್ತಕಾಭಿಷೇಕವನ್ನು ಕೂಡ ಮನೆಯಲ್ಲಿಯೇ ಕುಳಿತು ನೋಡಬಹುದಾಗಿದೆ.
ಇಂಟರ್ ನೆಟ್ ಹಾಗೂ ಟೆಲಿಫೋನ್ ಆವಿಷ್ಕಾರಕ್ಕೂ ಮುನ್ನ ಮಹಾಮಸ್ತಾಕಾಭಿಷೇಕ ಕವರೇಜ್ ಮಾಡುವುದು ಮಾಧ್ಯಮಗಳಿಗೆ ಸವಾಲಿನ ಕೆಲಸವಾಗಿತ್ತು. ಚೆನ್ನೈನ  ಮದ್ರಾಸ್ ಮೇಲ್ ಇವನಿಂಗ್ ವರದಿಗಾರಿಕೆ ತಂಡ ಇದನ್ನು ಸವಾಲಾಗಿ ಸ್ವೀಕರಿಸಿತ್ತು. ರಿಪೋರ್ಟರ್ ಜಿಎಂ ಎಡ್ವರ್ಡ್ ಮಸ್ತಕಾಭಿಷೇಕದ ವರದಿ ಮಾಡಲು 1910ರಲ್ಲಿ ಪಾರಿವಾಳಗಳಿಗೆ ಸುಮಾರು 6 ತಿಂಗಳ ಕಾಲ ತರಬೇತಿ ನೀಡಿದ್ದರು. 
ಶ್ರವಣಬೆಳಗೊಳಕ್ಕೆ ಪಾರಿವಾಳಗಳನ್ನು ಕರೆತಂದು ವಾಪಸ್ ಚೆನ್ನೈ ಕಚೇರಿಗೆ ಹಾರಾಟ ಮಾಡುವಂತೆ ತರಬೇತಿ ನೀಡಿದ್ದರು, ಪಾರಿವಾಳಗಳ ಕಾಲಿಗೆ ಕಾರ್ಯಕ್ರಮದ ವರದಿಯನ್ನು ಕಟ್ಟಿ ಕಳುಹಿಸಲಾಗುತ್ತಿತ್ತು. ಇದ್ನ್ನು ಪಡೆದುಕೊಂಡ ಪತ್ರಿಕಾ ಕಚೇರಿ ಅಂದು ಸಂಜೆಯೇ ಪತ್ರಿಕೆಯಲ್ಲಿ ಮಹಾಮಸ್ತಕಾಭಿಷೇಕದ ವರದಿಯನ್ನು ಪ್ರಕಟಿಸುತ್ತಿತ್ತು.
ಮಹಾಮಸ್ತಕಾಭಿಷೇಕದ ವರದಿ ಮಾಡಿದ ಮದ್ರಾಸ್ ಮೇಲ್ ಆಧುನಿಕ ಇತಿಹಾಸ ನಿರ್ಮಿಸಿತು ಎಂದು ಹಿರಿಯ ಬರಹಗಾರ ಅಶೋಕ್ ಕುಮಾರ್ ಹೇಳಿದ್ದಾರೆ.
SCROLL FOR NEXT