ಬೆಂಗಳೂರು; ಎಲ್ಲಾ ಮೆಟ್ರೋ ರೈಲುಗಳ ಲೋಕೊ ಪೈಲಟ್ (ಚಾಲಕ) ಆಸನದ ಹಿಂಭಾಗಕ್ಕೆ ಹೊಂದಿಕೊಂಡಿರುವ ಬೋಗಿಯ ಎರಡು ದ್ವಾರಗಳನ್ನು ಮಹಿಳೆಯರ ಪ್ರವೇಶ ಮತ್ತು ನಿರ್ಗಮನಕ್ಕೆ ಮೀಸಲಿಡಲು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್'ಸಿಎಲ್) ನಿರ್ಧರಿಸಿದ್ದು, ಫೆ.19ರಂದು ಈ ಸೇವೆ ಕಾರ್ಯ ಆರಂಭಗೊಳ್ಳಲಿದೆ ಎಂದು ತಿಳಿದುಬಂದಿದೆ.
ಮೊದಲ ಎರಡು ಪ್ರವೇಶಾವಕಾಶಗಳನ್ನು ಮಹಿಳೆಯರಿಗೆ ನೀಡಲಾಗುತ್ತದೆ. ಈ ಸೇವೆ ಸೋಮವಾರ ಬೆಳಿಗ್ಗೆ 5 ಗಂಟೆಯಿಂದಲೇ ಆರಂಭಗೊಳ್ಳಲಿದ್ದು, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಶುಕ್ರವಾರ ಮಧ್ಯಾಹ್ನದಿಂದಲೇ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಪ್ರಕಟಣೆಗಳನ್ನು ನೀಡಲಾಗುತ್ತಿದೆ ಎಂದು ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಿಎಂಆರ್'ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್ ಅವರು ಮಾತನಾಡಿ, ಈ ಬಗ್ಗೆ ಎರಡು ದಿನಗಳ ಹಿಂದೆಯೇ ಬಿಇಎಂಎಲ್'ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಘೋಷಣೆ ಮಾಡಲಾಗಿತ್ತು. ಮಾರ್ಚ್ 1 ರಿಂದಲೇ ಈ ಸೇವೆಗಳನ್ನು ಆರಂಭಿಸಲು ನಿರ್ಧರಿಸಲಾಗಿತ್ತು. ಈ ಸೇವೆಗಳನ್ನು ಕಾರ್ಯರೂಪಕ್ಕೆ ತರಲು ತಿಂಗಳುಗಳಾದರೂ ಕಾಲಾವಕಾಶ ಬೇಕೆಂದು ತಿಳಿದಿದ್ದೆ. ಸೇವೆ ಆರಂಭಿಸಿದ ಬಳಿಕ ಎದುರಾಗುವ ಸಮಸ್ಯೆಗಳನ್ನು ಕಂಡುಕೊಳ್ಳುವ ಸಲುವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಪ್ರಯಾಣಿಸುವ ಸಂದರ್ಭದಲ್ಲಿ ಪ್ರಯೋಗಿಕವಾಗಿ ಸೇವೆಯನ್ನು ಆರಂಭಿಸಲಾಗಿತ್ತು. ಈ ವೇಳೆ ಯಾವುದೇ ಅಧಿಕಾರಿಗಳು ಸಮಸ್ಯೆಗಳ ಬಗ್ಗೆ ವರದಿ ಮಾಡಲಿಲ್ಲ. ಹೀಗಾಗಿ ಸೋಮವಾರದಿಂದಲೇ ಸೇವೆಯನ್ನು ಆರಂಭಿಸಲು ನಿರ್ಧರಿಸಿದ್ದೇವೆಂದು ಹೇಳಿದ್ದಾರೆ.
ನಮ್ಮ ಮೆಟ್ರೋ ಪ್ರಧಾನ ವ್ಯವಸ್ಥಾಪಕ ಯು.ಎ. ವಸಂತ್ ರಾವ್ ಮಾತನಾಡಿ, ಸೋಮವಾರದೊಳಗಾಗಿ ಪ್ರಯಾಣಿಕರಿಗೆ ಈ ಬಗ್ಗೆ ತಿಳಿಸಲು ಸೇವೆಗಳ ಕುರಿತಂತೆ ಜನರಿಗೆ ಮಾಹಿತಿಗಳನ್ನು ತಲುಪಿಸಲು ಸಾಕಷ್ಟು ಯೋಜನೆಗಳನ್ನು ರೂಪಿಸುತ್ತಿದ್ದೇವೆ. ಪ್ರತೀನಿತ್ಯ 3.6 ರಿಂದ 3.7 ಲಕ್ಷ ಪ್ರಯಾಣಿಕರು ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಾರೆ. ಸಾಕಷ್ಟು ಮಹಿಳಾ ಪ್ರಯಾಣಿಕರು ನಮಗೆ ಪ್ರತ್ಯೇಕ ಬೋಗಿ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದರು ಎಂದು ತಿಳಿಸಿದ್ದಾರೆ.