ಕರ್ನಾಟಕ ವಿಧಾನಸಭಾ ಚುನಾವಣೆಯ ಚಿಹ್ನೆಯನ್ನು ಬಿಡುಗಡೆ ಗೊಳಿಸಿದ ರಾಜ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್
ಬೆಂಗಳೂರು: ಇದೇ ಮೊದಲ ಬಾರಿಗೆ ದಾಖಲೆ ಮಟ್ಟದಲ್ಲಿ ಮಹಿಳಾ ಮತದಾರರ ನೋಂದಣಿ ಸಂಖ್ಯೆ ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ಮಹಿಳಾ ಮತದಾರರು ಹೆಚ್ಚಿರುವ ಮತಗಟ್ಟೆಗಳಲ್ಲಿ ಮಹಿಳಾ ಮತಗಟ್ಟೆಗಳನ್ನು ನಿರ್ಮಿಸಲು ಚುನಾವಣಾ ಆಯೋಗ ನಿರ್ಧರಿಸಿದೆ.
ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿರುವ ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಅವರು, ಕಳೆದ ನವೆಂಬರ್ ತಿಂಗಳಿನಲ್ಲಿ ರಾಜ್ಯ ಚುನಾವಣಾ ಆಯೋಗ ನಡೆಸಿದ ವಿಶೇಷ ಮತದಾರ ಪಟ್ಟಿ ಪರಿಷ್ಕರಣೆಯಲ್ಲಿ ಇದೇ ಮೊದಲ ಬಾರಿಗೆ ದಾಖಲೆ ಮಟ್ಟದಲ್ಲಿ ಒಟ್ಟಾರೆ 30.41 ಲಕ್ಷ ಅರ್ಜಿಗಳು ನೋಂದಾಣಿಯಾಗಿದ್ದವು. ಈ ಪೈಕಿ 29.54 ಅರ್ಜಿಗಳು ಅಂಗೀಕೃತವಾಗಿವೆ. 18ರಿಂದ 19 ವರ್ಷ ವಯೋಮಾನದ ಅರ್ಜಿಗಳಾಗಿವೆ. ಪ್ರಮುಖವಾಗಿ ಮಹಿಳಾ ಮತದಾರರ ನೋಂದಣಿ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಕಳೆದ ನ.28 ರಿಂದ ಜ.22ರವರೆಗೆ ಆಯೋಗದ ಸಿಬ್ಬಂದಿ ಮನೆ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮತದಾರರ ಪಟ್ಟಿಗೆ ಹೊಸ ಹೆಸರುಗಳನ್ನು ಸೇರ್ಪಡೆಗೊಳಿಸಿ, ಮೃತಪಟ್ಟವರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ವಿಳಾಸ ಬದಲಾವಣೆ ಮಾಡಲಾಗಿದೆ. ಫೆ.22ರ ವರೆಗೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಫೆ.28ರಂದು ಚುನಾವಣಾ ಆಯೋಗ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಿದೆ. ನೋಂದಣಿಯಾಗಿರುವ ಎಲ್ಲಾ ಮತದಾರರಿಗೆ ಮಾ.15ರೊಳಗೆ ಮತದಾರರ ಗುರುತಿನ ಚೀಟಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಈ ವರೆಗಿನ ಪಟ್ಟಿಯ ಪ್ರಕಾರ 2.51 ಕೋಟಿ ಪುರುಷ ಮತದಾರರು 2.44 ಕೋಟಿ ಮಹಿಳಾ ಮತದಾರರು ಹಾಗೂ 4552 ತೃತೀಯ ಲಿಂಗಿ ಮತದಾರರಿದ್ದು, ಒಟ್ಟಾರೆ 4.96ಕೋಟಿ ಮತದಾರರಿದ್ದಾರೆ. ಬೆಂಗಳೂರು ನಗರದಲ್ಲಿ 87,98,335 ಮತದಾರರಿದ್ದಾರೆ. ಅನರ್ಹರಾಗಿರುವ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಕ್ಷೇತ್ರ ಬದಲಾವಣೆ ಬಯಸಿರುವ 5,84,438, ಪುನರಾವರ್ತನೆಯಾಗಿರುವ 61,792 ಮತ್ತು ಮೃತಪಟ್ಟಿರುವ 3,67,474 ಸೇರಿದಂತೆ 10,13,704 ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಫೆ.28ರಂದು ಆಯೋಗದಿಂದ ಅಂತಿಮ ಪಟ್ಟಿ ಪ್ರಕಟವಾದ ನಂತರ ರಾಜ್ಯದಲ್ಲಿ ಎಷ್ಟು ಮತದಾರರಿದ್ದಾರೆಂಬುದು ಖಾತರಿಯಾಗಲಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಚುನಾವಣೆಯ ಚಿಹ್ನೆಯನ್ನು ಸಂಜೀವ್ ಕುಮಾರ್ ಅವರು ಬಿಡುಗಡೆಗೊಳಿಸಿದ್ದಾರೆ, ಚುನಾವಣೆಯಲ್ಲಿ ಪ್ರತಿಯೊಬ್ಬರೂ ಮತದಾನ ಮಾಡಬೇಕೆಂಬ ಉದ್ದೇಶವನ್ನು ಆಯೋಗ ಹೊಂದಿದ್ದು, ವಿವಿಧ ಕಾರಣಗಳಿಂದ ಮತಗಟ್ಟೆಗೆ ನಡೆದುಕೊಕಂಡು ಬಾರಲು ಸಾಧ್ಯವಾಗದ 12 ಲಕ್ಷ ಮತದಾರರು ಮತದಾರರ ಪಟ್ಟಿಯಲ್ಲಿದ್ದಾರೆ. ಅಂಗವಿಕಲರು, ಕಾಯಿಲೆಗಳಿಂದ ಬಳಲುತ್ತಿರುವವರನ್ನು ಮತಗಟ್ಟೆಗೆ ಕರೆದುಕೊಂಡು ಬರುವುದಕ್ಕಾಗಿ ವ್ಹೀಲ್ ಚೇರ್ ಸೇರಿದಂತೆ ವಾಹನ ಸೌಲಭ್ಯ ಕಲ್ಪಿಸಲಾಗುವುದು. ಮಹಿಳಾ ಮತದಾರರು ಹೆಚ್ಚಿರುವ ಮತಗಟ್ಟೆಗಳಲ್ಲಿ ಮಹಿಳಾ ಮತಗಟ್ಟೆಗಳನ್ನು ನಿರ್ಮಿಸಲಾಗುವುದು. ಇಲ್ಲಿ ಮಹಿಳೆಯರನ್ನೇ ಚುನಾವಣಾ ಸಿಬ್ಬಂದಿಯಾಗಿ ಹಾಗೂ ಭದ್ರತೆಗೆ ನಿಯೋಜಿಸಲಾಗುವುದು ಎಂದಿದ್ದಾರೆ.