ಬೆಂಗಳೂರು: ಸರ್ವೋದಯ ಪಕ್ಷದ ಶಾಸಕರಾದ ಹಿರಿಯ ರೈತ ಹೋರಾಟಗಾರ ಕೆ.ಎಸ್.ಪುಟ್ಟಣ್ಣಯ್ಯ ಅವರ ಸಾವಿನ ಸುದ್ದಿ ದಿಗ್ಭ್ರಮೆ ಉಂಟು ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ರೈತ ಚಳುವಳಿ ಒಬ್ಬ ಧೀಮಂತ ನಾಯಕನನ್ನು ಕಳೆದುಕೊಂಡಿದೆ. ಬಹುಕಾಲದ ಸ್ನೇಹಿತನ ಅಗಲಿಕೆ ನನಗೆ ಅತೀವ ದು:ಖವನ್ನುಂಟು ಮಾಡಿದೆ ಎಂದು ಹೇಳಿರುವ ಸಿಎಂ ಪುಟ್ಟಣ್ಣಯ್ಯ ಕುಟುಂಬಕ್ಕೆ ಸಾಂತ್ವನ ತಿಳಿಸಿದ್ದಾರೆ.
ಕುರುಬೂರು ಶಾಂತಕುಮಾರ್ ಮಾತನಾಡಿ, ರಾಜ್ಯದ ರೈತರ ಪಾಲಿಗೆ ತುಂಬಲಾರದ ನಷ್ಟವಾಗಿದೆ. ಕೆ.ಎಸ್.ಪುಟ್ಟಣ್ಣಯ್ಯನವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ತಿಳಿಸಿದರು.
ಕೆ.ಎಸ್.ಪುಟ್ಟಣ್ಣಯ್ಯ ನಿಧನಕ್ಕೆ ಸಚಿವ ಮಹದೇವಪ್ಪ ಸಂತಾಪ ಸೂಚಿಸಿ, ರೈತರ ಮುಖಂಡರಾಗಿ ರೈತರ ಪರವಾಗಿ ಹಲವಾರು ಹೋರಾಟ ಮಾಡಿದ್ದಾರೆ. ಬಡವರ, ಮಹಿಳೆಯರ, ಶೋಷಿತರ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರ ನಿಧನದಿಂದ ರಾಜ್ಯಕ್ಕೆ ತುಂಬಲಾದ ನಷ್ಟ ಉಂಟಾಗಿದೆ. ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಹೇಳಿದರು.