ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ
ಬೆಂಗಳೂರು: ಶುದ್ಧ ಕನ್ನಡ ಕರ್ನಾಟಕದಲ್ಲಿರುವ ಜನರಿಗೇ ಗೊತ್ತಿಲ್ಲ. ದಕ್ಷಿಣ ಕನ್ನಡ, ಶಿವಮೊಗ್ಗ ಮತ್ತು ಉತ್ತರ ಕನ್ನಡದವರನ್ನು ಹೊರತುಪಡಿಸಿದರೆ ಇತರರಿಗೆ ಆ ಯೋಗ್ಯತೆಯೇ ಇಲ್ಲ ಎಂದು ಹೇಳಿಕೆ ನೀಡಿ ತೀವ್ರ ಟೀಕೆಗಳಿಗೆ ಗುರಿಯಾಗಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಯವರು ಹೇಳಿಕೆ ಕುರಿತಂತೆ ಸೋಮವಾರ ಕ್ಷಮೆಯಾಚಿಸಿದ್ದಾರೆ.
ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ತಮ್ಮ ಹೇಳಿಕೆ ಕುರಿತಂತೆ ಸ್ಪಷ್ಟನೆ ನೀಡಿರುವ ಅವರು, ಪುತ್ತೂರಿನ ಕಾಲೇಜೊಂದರಲ್ಲಿ ನಡೆದ ಕಾರ್ಯಕ್ರಮಲ್ಲಿ ಮಾತನಾಡಿದ ವಿಷಯದ ಕುರಿತು ಅನಾವಶ್ಯಕವಾಗಿ ಚರ್ಚೆಗಳು ನಡೆಯುತ್ತಿವೆ. ಕೆಲ ದೃಶ್ಯ ಮಾಧ್ಯಮಗಳು ನನ್ನ ಮಾತು ಹಾಗೂ ಆಲೋಚನೆಗಳನ್ನು ತಿರುಚಿ ಅಪಪ್ರಚಾರ ಮಾಡುತ್ತಿವೆ. ವಾಸ್ತವಿಕತೆ ಏನೇ ಇರಲಿ. ಇದರಿಂದ ಕನ್ನಡಿಗರಿಗೆ ನೋವಾಗಿದೆ ಎಂದಾದರೆ ಕ್ಷಣೆ ಕೇಳುವುದಕ್ಕೆ ಯಾವುದೇ ಅಳುಕಿಲ್ಲ. ಕರ್ನಾಟಕದ ಜನರು ನನ್ನನ್ನು ಬೆಳೆಸಿದ್ದಾರೆ. ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಅವರ ಎದುರು ಕ್ಷಮೆ ಕೇಳಲು ನನಗೆ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದ್ದಾರೆ.
ಕನ್ನಡ ಭಾಷೆ ಕುರಿತ ಅಧ್ಯಯನ ಮತ್ತಷ್ಟು ಆಳವಾಗಿ ಆಗಬೇಕಿದೆ. ಕನ್ನಡ ತರ್ಜುಮೆ ಮಾಡಿಕೊಂಡು ಕೇಳುವ ಪರಿಸ್ಥಿತಿಗೆ ಬರಬಾರದು. ನಮ್ಮ ಭಾಷೆ ಎಂದಿಗೂ ನಮ್ಮ ನೆಲದಲ್ಲಿ ವಿಜೃಂಭಿಸುತ್ತಿರಬೇಕು. ನನ್ನ ಹೇಳಿಕೆಯಿಂದ ಕನ್ನಡಿಗರಿಗೆ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ ಎಂದು ತಿಳಿಸಿದ್ದಾರೆ.
ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರಧಾನಮಂತ್ರಿ ಕೌಶಲ್ಯ ಯೋಜನೆಯಡಿಯಲ್ಲಿ ಆರಂಭಿಸಲಾದ ಉಚಿತ ತಾಂತ್ರಿಕ ತರಬೇತಿ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿದ ಬಳಿಕ ಮಾತನಾಡಿದ್ದ ಅನಂತ್ ಕುಮಾರ್ ಹೆಗಡೆಯವರು, ಇಂಗ್ಲೀಷ್'ನ್ನು ಶುದ್ಧ ಕನ್ನಡಕ್ಕೆ ಭಾಷಾಂತರ ಮಾಡುವುದೇ ಇಂದಿನ ಸವಾಲು, ಶುದ್ಧ ಕನ್ನಡ ಎಲ್ಲೂ ಇಲ್ಲ. ದಕ್ಷಿಣ ಕನ್ನಡ, ಶಿವಮೊಗ್ಗ ಮತ್ತು ಉತ್ತರ ಕನ್ನಡದವರನ್ನು ಹೊರತು ಪಡಿಸಿದರೆ ಇತರರಿಗೆ ಆ ಯೋಗ್ಯತೆಯೇ ಇಲ್ಲ ಎಂದು ಹೇಳಿದ್ದರು.
ಹೆಗಡೆಯವರ ಈ ಹೇಳಿಕೆ ತೀವ್ರ ಚರ್ಚೆಗಳಿಗೆ ಗ್ರಾಸವಾಗಿದೆ. ಅಲ್ಲದೆ, ಕೇಂದ್ರ ಸಚಿವರ ಹೇಳಿಕೆಗೆ ಬಿಜೆಪಿಯಲ್ಲಿಯೇ ವಿರೋಧ ವ್ಯಕ್ತವಾಗತೊಡಗಿದೆ.
ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಅವರು ಪ್ರತಿಕ್ರಿಯೆ ನೀಡಿ, ಹೆಗಡೆಯವರು ರಾಜ್ಯದ ಕೆಲವೇ ಪ್ರದೇಶದ ಕನ್ನಡ ಮಾತ್ರ ಉತ್ತಮ, ತರ್ಜುಮೆಗೆ ಯೋಗ್ಯ ಎಂದು ಹೇಳಿದ್ದಕ್ಕೆ ತಮ್ಮ ವಿರೋಧವಿದೆ. ಅವರ ಹೇಳಿಕೆ ಒಂದು ರೀತಿಯಲ್ಲಿ ಇತರ ಭಾಗಗಳ ಕನ್ನಡವನ್ನು ಹೀಯಾಳಿಸುವಂತಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.