ರೈತಪರ ಧೀಮಂತ ನಾಯಕ, ರಾಜ್ಯದ ಹಿರಿಯ ರೈತ ಹೋರಾಟಗಾರ, ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ
ಬೆಂಗಳೂರು: ರೈತಪರ ಧೀಮಂತ ನಾಯಕ, ರಾಜ್ಯದ ಹಿರಿಯ ರೈತ ಹೋರಾಟಗಾರ, ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರ ಅಗಲಿಕೆ ರಾಜ್ಯದ ರೈತರ ಹೋರಾಟಕ್ಕಾದ ಭಾರೀ ಹಿನ್ನಡೆಯಾಗಿದೆ.
1949 ಡಿಸೆಂಬರ್ 23 ರಂದು ಕ್ಯಾತನಹಳ್ಳಿಯಲ್ಲಿ ಶ್ರೀಕಂಠೇಗೌಡ ಹಾಗೂ ಶಾರದಮ್ಮ
ದಂಪತಿಯ ಪುತ್ರರಾಗಿ ಜನಿಸಿದ್ದ ಪುಟ್ಟಣ್ಣಯ್ಯ ರಾಜ್ಯದಲ್ಲಿ ರೈತ ಹೋರಾಟದ ಶಕ್ತಿಯಾಗಿದ್ದರು. ರೈತ ಚಳುವಳಿಯನ್ನು ಅತ್ಯಂತ ಗಟ್ಟಿಯಾಗಿ ಕಟ್ಟಿದ ಕೆ.ಎಸ್.ನಂಜುಂಡಸ್ವಾಮಿ ಅವರ ಕಟ್ಟಾ ಬೆಂಬಲಿಗರಾಗಿದ್ದರು. ಹಳೇ ಮೈಸೂರು ಭಾಗದಲ್ಲಿ ರೈತ ಚಳುವಳಿಯನ್ನು ಅತ್ಯಂತ ಬಲಿಷ್ಠವಾಗಿ ಸಂಘಟಿಸಿದ ಮುಂಚೂಣಿ ನಾಯಕರಲ್ಲಿ ಪುಟ್ಟಣ್ಣಯ್ಯ ಕೂಡ ಒಬ್ಬರಾಗಿದ್ದರು.
ರೈತ ಸಂಘ ವಿಭಜನೆಗೊಂಡ ಸಂದರ್ಭದಲ್ಲಿ ತಮ್ಮದೇ ಆದ ಬಣವನ್ನು ಕಟ್ಟಿಕೊಂಡು ರಾಜ್ಯಾದ್ಯಂತ ರೈತಪರ ಹೋರಾಟ ನಡೆಸಿದ್ದರು. ದೆಹಲಿಗೂ ರೈತರನ್ನು ಕರೆದೊಯ್ದು ಕೇಂದ್ರ ಸರ್ಕಾರದ ವಿರುದ್ಧ ಹಲವಾರು ಪ್ರತಿಭಟನೆಗಳನ್ನು ನಡೆಸಿದ್ದರು. ರಾಜ್ಯದಲ್ಲಿ ರೈತರಿಗೆ ಅನ್ಯಾಯವಾದಾಗಲೆಲ್ಲಾ ಬೀದಿಗಿಳಿದು ಹೋರಾಟ ಮಾಡುತ್ತಿದ್ದರು. ಅರೆಬೆತ್ತಲೆ ಚಳುವಳಿ, ಚಡ್ಡಿ ಮೆರವಣಿಗೆಯನ್ನೂ ಮಾಡಿ ಎಲ್ಲರ ಗಮನ ಸೆಳೆದಿದ್ದರು.
ಸ್ವತಃ ಕೃಷಿಕರಾಗಿದ್ದ ಪುಟ್ಟಣ್ಣಯ್ಯ ಅವರಿಗೆ ಕೃಷಿ ಕ್ಷೇತ್ರದ ಅಷ್ಟೂ ಸಮಸ್ಯೆಗಳ ಅರಿವಿತ್ತು. ರೈತರ ಸಮಸ್ಯೆಗಳನ್ನು ಚೆನ್ನಾಗಿ ಗ್ರಹಿಸುತ್ತಿದ್ದ ಅವರು, ಅತ್ಯಂತ ಕರಾರುವಕ್ಕಾಗಿ ಪ್ರಸ್ತುತಪಡಿಸುತ್ತಿದ್ದರು. ಅತ್ಯುತ್ತಮ ವಾಗ್ಮಿಯೂ ಆಗಿದ್ದ ಪುಟ್ಟಣ್ಣಯ್ಯ ಅವರ ಮಾತುಗಳನ್ನು ಕೇಳಲು ಜನರೂ ಇಷ್ಟಪಡುತ್ತಿದ್ದರು. ವಿಧಾನಸಭೆಯಲ್ಲೂ ಅವರು ವಿಷಯ ಮಂಡನೆ ಮಾಡುವಾಗ ಶಾಸಕರು ತದೇಕಚಿತ್ತದಿಂದ ಆಲಿಸುತ್ತಿದ್ದರು.
4 ದಶಕಗಳಿಂದ ರೈತ ಹೋರಾಟದಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರು. ಕಾವೇರಿ, ಮಹದಾಯಿ, ನೀರಾ ಚಳುವಳಿ, ಕಬ್ಬು ಬೆಳೆಗಾರರ ಸಮಸ್ಯೆ, ಬೆಲೆ ಕುಸಿತದಂತಹ ಕೃಷಿಕರ ಸಮಸ್ಯೆಗಳ ಬಗ್ಗೆ ಸುದೀರ್ಘ ಹೋರಾಟದಲ್ಲಿ ಅವರು ಭಾಗಿಯಾಗಿದ್ದರು.
1994ರಲ್ಲಿ ಕರ್ನಾಟಕ ವಿಧಾನಸಭೆಗೆ ಪಾಂಡವಪುರದಿಂದ ಮೊದಲ ಬಾರಿಗೆ ರೈತ ಸಂಘದಿಂದ ಆಯ್ಕೆಯಾಗಿದ್ದ ಅವರು, ವಿಧಾನಸಭೆಗೆ ಮನೆಯಿಂದಲೇ ಬುತ್ತಿ ಕಟ್ಟಿಕೊಂಡು ಬಂದು ಊಟ ಮಾಡುವ ಮೂಲಕ ಗಮನಸೆಳೆದಿದ್ದರು. ಬಳಿಕ ಹಲವು ಬಾರಿ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಅವರು 2013ರಲ್ಲಿ ಮೇಲುಕೋಟೆಯಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಜೆಡಿಎಸ್'ನ ಪ್ರಭಾವಿ ರಾಜಕಾರಣಿ ಹಾಗೂ ಹಾಲಿ ಸಂಸದ ಸಿ.ಎಸ್ ಪುಟ್ಟರಾಜು ಅವರನ್ನೇ ಮಣಿಸಿದ್ದರು.