ಮಂಡ್ಯ: ರೈತ ಮುಖಂಡ, ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಪಾಂಡವಪುರ ತಾಲ್ಲೂಕಿನ ಸ್ವಗ್ರಾಮ ಕ್ಯಾತನಹಳ್ಳಿಯಲ್ಲಿ ಅವರ ತೆಂಗಿನ ತೋಟದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ನೆರವೇರಿತು.
ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ರೈತರು, ಅಭಿಮಾನಿಗಳು ಕುಟುಂಬ ಸದಸ್ಯರು ಅಂತ್ಯಸಂಸ್ಕಾರಕ್ಕೆ ಸಾಕ್ಷಿಯಾದರು.
ಅಂತ್ಯ ಸಂಸ್ಕಾರವನ್ನು ಯಾವುದೇ ಧಾರ್ಮಿಕ ವಿಧಿವಿಧಾನದಿಂದ ಮಾಡದೆ ಹೋರಾಟ ಗೀತೆಯೊಂದಿಗೆ ಮಾಡಲಾಯಿತು.ಪುಟ್ಟಣ್ಣಯ್ಯ ಅವರ ಪಾರ್ಥಿವ ಶರೀರಕ್ಕೆ ‘ಹಸಿರು ಹೊದಿಕೆ’ ಮಾಡಿ, ರಾಜ್ಯ ರೈತಸಂಘ, ಹಸಿರು ಸೇನೆ ಹಾಗೂ ನೆರದಿದ್ದ ಸಾವಿರಾರು ರೈತರು ಹಸಿರು ಶಾಲು ಬೀಸುವ ಮೂಲಕ ‘ಹಸಿರು ನಮನ’ ಸಲ್ಲಿಸಿದ್ದು ವಿಶೇಷವಾಗಿತ್ತು.
ವಿವಿಧ ಜಿಲ್ಲೆಗಳಿಂದ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಬಂದಿದ್ದ ಸಾವಿರಾರು ರೈತರು ತಮ್ಮ ನೆಲದಿಂದ ಹಿಡಿ ಮಣ್ಣು ತಂದು ಪುಟ್ಟಣ್ಣಯ್ಯ ಅವರ ಪಾರ್ಥಿವ ಶರೀರಕ್ಕೆ ಸಲ್ಲಿಸಿದರು.
ಜಿಲ್ಲಾಧಿಕಾರಿ ಎನ್. ಮಂಜುಶ್ರೀ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳದಲ್ಲಿದ್ದು ಸರ್ಕಾರಿ ಗೌರವ ಸಲ್ಲಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಎಂ. ಕೃಷ್ಣಪ್ಪ ಸೇರಿದಂತೆ ಹಲವು ಶಾಸಕರು, ಮುಖಂಡರು, ರೈತ ನಾಯಕರು ಭಾಗಿಯಾಗಿದ್ದರು.ಸ್ವರಾಜ್ ಇಂಡಿಯಾ ಪಕ್ಷದ ಮುಖಂಡ ಯೋಗೇಂದ್ರ ಯಾದವ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.