ಬೆಂಗಳೂರು: ಮುಂಬರುವ ರಾಜ್ಯವಿಧಾನಸಭಾ ಚುನಾವಣೆಗಾಗಿ ಆಡಳಿತರೂಢ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮುಂದಿನ ತಿಂಗಳು ಬಿಡುಗಡೆಗೊಳಿಸಲಿದ್ದಾರೆ ಎಂದು ಪ್ರಣಾಳಿಕೆ ಸಮಿತಿ ಅಧ್ಯಕ್ಷ ಎಂ. ವೀರಪ್ಪಮೊಯ್ಲಿ ತಿಳಿಸಿದ್ದಾರೆ
ಮಾರ್ಚ್ 10 -15 ರೊಳಗೆ ಪ್ರಣಾಳಿಕೆ ಬಿಡುಗಡೆಯಾಗಲಿದ್ದು, ಜನರಿಗೆ ನೀಡಿರುವ ಆಶ್ವಾಸನೆ ಈಡೇರಿಸುವಲ್ಲಿ ಕಾಂಗ್ರೆಸ್ ಬದ್ದವಾಗಿದೆ . ಇದು ಭರವಸೆಯ ದಾಖಲೆಯಾಗಿದ್ದು, ಜನರಿಗಾಗಿ ಪ್ರಕಟಿಸಲಾಗುತ್ತಿದೆ ಎಂದು ಹೇಳಿದರು.
ಬಡತನ ನಿರ್ಮೂಲನೆ, ಹಸಿವು, ಕೊಳಗೇರಿಗಳ ಅಭಿವೃದ್ಧಿ, ಆದಾಯ ಸೃಷ್ಟಿ ಮತ್ತಿತರ ವಿಚಾರಗಳ ಬಗ್ಗೆ ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ಪ್ರತಿಯೊಂದು ಸಮಾಜದ ಸಮಗ್ರ ಮಾಹಿತಿ ಸಂಗ್ರಹಿಸಿ ಈ ಪ್ರಣಾಳಿಕೆ ರೂಪಿಸಲಾಗಿದೆ ಅಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 5 ವರ್ಷಗಳ ಅವಧಿಯಲ್ಲಿ ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆಯೂ ಬೆಳಕು ಚೆಲ್ಲಲಾಗಿದೆ ಎಂದು ತಿಳಿಸಿದರು.
ರಾಜ್ಯ, ವಲಯ, ಜಿಲ್ಲಾವಾರಿನಂತೆ ಪ್ರಣಾಳಿಕೆ ರೂಪಿಸಲಾಗಿದೆ.30 ಜಿಲ್ಲೆಗಳು ಹಾಗೂ ಆರು ವಲಯಗಳು ಸೇರಿದಂತೆ ರಾಜ್ಯದ ಎಲ್ಲಾ ಭಾಗದ ಅಭಿವದ್ದಿಯನ್ನು ಪರಿಗಣಿಸಲಾಗಿದೆ ಎಂದು ವೀರಪ್ಪಮೊಯ್ಹಿ ತಿಳಿಸಿದರು.