ಬೆಂಗಳೂರು: ರಾಜ್ಯದಲ್ಲಿರುವ ಯಾವುದೇ ಶಾಲೆಗೆ ದಾಖಲಾದ ಮಕ್ಕಳ, ಪೋಷಕರ ಅಥವಾ ಶಿಕ್ಷಕರ ಮಾಹಿತಿ ಖಾಸಗಿ ಮಾಹಿತಿಗಳು ಖಾಸಗಿ ಕಂಪೆನಿಗಳ ಕೈಗೆ ಸಿಗುವ ಸಾಧ್ಯತೆಯಿದೆ.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಖಾಸಗಿ ಕಂಪೆನಿ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು ಅದರ ಪ್ರಕಾರ, ರಾಜ್ಯದಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸಲು ಮಾಹಿತಿ ಒದಗಿಸಲಾಗುತ್ತದೆ.
ಸ್ಕೂಲ್ ಜಿಲಿಂಕ್ ಪ್ರೈವೆಟ್ ಲಿಮಿಟೆಡ್ ಜೊತೆ ಮಾಡಿಕೊಂಡಿರುವ ನಿಲುವಳಿ ಒಪ್ಪಂದ ಪ್ರಕಾರ, ಶಿಕ್ಷಣ ಇಲಾಖೆ ವಿದ್ಯಾರ್ಥಿಗಳು, ಅವರ ಪೋಷಕರು, ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಹಾಗೂ ಖಾಸಗಿ ಶಾಲೆಗಳ ಶಿಕ್ಷಕರ ಖಾಸಗಿ ವಿವರಗಳನ್ನು ಹಂಚಿಕೊಳ್ಳಲು ಒಪ್ಪಿಕೊಂಡಿದೆ. ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಇಮೇಲ್ ವಿಳಾಸ ಇತ್ಯಾದಿಗಳನ್ನು ವಿಶ್ಲೇಷಣೆಗೆಂದು ಕಂಪೆನಿಗೆ ನೀಡಲಾಗುತ್ತದೆ.
ಇದುವರೆಗೆ ಸುಮಾರು 2.5 ಲಕ್ಷ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರು ಈಗಾಗಲೇ ತಮ್ಮ ಮಾಹಿತಿಗಳನ್ನು ಖಾಸಗಿ ಕಂಪೆನಿ ಜೊತೆಗೆ ಹಂಚಿಕೊಂಡಿದ್ದಾರೆ. ಆದರೆ ಇದು ನಿಯಮಬಾಹಿರವಾಗಿದೆ ಎಂದು ಕೆಲವು ಇಲಾಖೆಗಳ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕೆಲವರು ಸರ್ಕಾರಕ್ಕೆ ಪತ್ರ ಕೂಡ ಬರೆದಿದ್ದಾರೆ.
ಖಾಸಗಿ ಕಂಪೆನಿ ಜೊತೆ ಮಾಹಿತಿ ಹಂಚಿಕೊಳ್ಳುವುದು ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಪ್ರಕಾರ ಸಂಪೂರ್ಣವಾಗಿ ನಿಯಮಬಾಹಿರ. ಕಾಯ್ದೆಯ ಸೆಕ್ಷನ್ 72ರ ಪ್ರಕಾರ, ವ್ಯಕ್ತಿಯ ಒಪ್ಪಿಗೆಯಿಲ್ಲದೆ ಖಾಸಗಿ ವಿಷಯಗಳನ್ನು ಹಂಚಿಕೊಳ್ಳುವುದು ಕಾಯ್ದೆಯ ಉಲ್ಲಂಘನೆಯಾಗುತ್ತದೆ ಎಂದು ಹೇಳುತ್ತದೆ.
ಇದಕ್ಕೆ ಎರಡು ವರ್ಷಗಳ ಜೈಲುಶಿಕ್ಷೆ ವಿಧಿಸಬಹುದು ಎನ್ನುತ್ತಾರೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು. ಖಾಸಗಿ ಕಂಪೆನಿ ಜೊತೆ ಒಡಂಬಡಿಕೆ ಮಾಡಿಕೊಳ್ಳುವ ಮುಖ್ಯ ಉದ್ದೇಶ ರಾಜ್ಯದಲ್ಲಿನ ಶಿಕ್ಷಣ ವ್ಯವಸ್ಥೆಯ ಡಿಜಿಟಲೀಕರಣ ಎಂದು ಶಿಕ್ಷಣ ಇಲಾಖೆ ಒಡಂಬಡಿಕೆಯಲ್ಲಿ ನಮೂದಿಸಿದೆ. ಈ ನಿರ್ಧಾರದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಹ ಆಡಳಿತ ತಿಳಿಸಿದೆ.
ಹಂಚಿಕೊಂಡಿರುವ ಖಾಸಗಿ ವಿಷಯಗಳನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ. ಜನರಿಗೆ ತಡರಾತ್ರಿ ಕೂಡ ಮಾರ್ಕೆಟಿಂಗ್ ಕರೆಗಳು ಬರುತ್ತಿರುತ್ತವೆ. ಇದು ಮುಂದುವರಿದರೆ ನಾವು ಕೋರ್ಟ್ ಗೆ ಹೋಗಿ ಕಾನೂನು ಹೋರಾಟ ನಡೆಸುತ್ತೇವೆ ಎಂದು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಕೇಳಿದಾಗ, ಈ ಎಲ್ಲಾ ಆರೋಪಗಳು ನಿರಾಧಾರ. ಕಾನೂನು ಇಲಾಖೆ ಒಡಂಬಡಿಕೆಯನ್ನು ಮಾಡಿಕೊಂಡಿದೆ. ಮಾಹಿತಿ ತಂತ್ರಜ್ಞಾನ ನೀತಿ ಪ್ರಕಾರ, ವ್ಯಕ್ತಿಯ ಖಾಸಗಿತನವನ್ನು ಗೌಪ್ಯವಾಗಿಡುವಂತೆ ನೋಡಿಕೊಳ್ಳಲಾಗುತ್ತಿದೆ ಎಂದಿದ್ದಾರೆ.