ಬಂಧಿತ ಕಾಂಗ್ರೆಸ್ ಮುಖಂಡ ನಾರಾಯಣ ಸ್ವಾಮಿ
ಬೆಂಗಳೂರು: ಬಿಬಿಎಂಪಿ ಕಚೇರಿಗೆ ನುಗ್ಗಿ ಪೆಟ್ರೋಲ್ ಎರಚಿ, ಧಮ್ಕಿ ಹಾಕಿದ್ದ ಕೆಆರ್ ಪುರಂನ ಬ್ಲಾಕ್ ಕಾಂಗ್ರೆಸ್ ಮುಖಂಡ ನಾರಾಯಣ ಸ್ವಾಮಿ ಪೊಲೀಸರಿಗೆ ಶರಣಾಗಿದ್ದಾರೆ.
ಕಳೆದ ಫೆಬ್ರವರಿ ದಿನಾಂಕ 16ರಂದು ಹೊರಮಾವು ಬಿಬಿಎಂಪಿ ಕಚೇರಿಗೆ ನುಗ್ಗಿ ಪೆಟ್ರೋಲ್ ಸುರಿದು ಬೆಂಕಿ ಹಾಕುವುದಾಗಿ ನಾರಾಯಣ ಸ್ವಾಮಿ ಬೆದರಿಕೆ ಹಾಕಿದ್ದರು. ಮೂಲಗಳ ಪ್ರಕಾರ ಘಟನೆ ಬಳಿಕ ತಮ್ಮ ವಿರುದ್ಧ ವ್ಯಕ್ತವಾಗಿದ್ದ ತೀವ್ರ ಆಕ್ರೋಶ ಬೆನ್ನಲ್ಲೇ ತಲೆ ಮರೆಸಿಕೊಂಡಿದ್ದ ನಾರಾಯಣ ಸ್ವಾಮಿ ಅವರ ಬಂಧನಕ್ಕಾಗಿ ರಾಮಮೂರ್ತಿ ನಗರ ಪೊಲೀಸರು ನಾಲ್ಕು ತಂಡಗಳನ್ನು ರಚಿಸಿದ್ದರು. ಅದರಂತೆ ಇಂದು ಬೆಳಗ್ಗೆ ಕಾಂಗ್ರೆಸ್ ಮುಖಂಡ ನಾರಾಯಣ ಸ್ವಾಮಿ ಅವರನ್ನು ರಾಮಮೂರ್ತಿ ನಗರದ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣದ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದ ನಾರಾಯಣ ಸ್ವಾಮಿ, ಇಂದು ಬೆಳಗ್ಗೆ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದು, ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.
ಕಳೆದ ಫೆಬ್ರವರಿ 16ರಂದು ಹೊರಮಾವು ಬಿಬಿಎಂಪಿ ಕಚೇರಿಗೆ ನುಗ್ಗಿದ್ದ ನಾರಾಯಣ ಸ್ವಾಮಿ, ಜಮೀನು ಖಾತೆ ಮಾಡಿಕೊಡದಿದ್ದರೆ ಕಚೇರಿಗೆ ಬೆಂಕಿ ಹಚ್ಚುವುದಾಗಿ ಅಲ್ಲಿದ್ದ ಅಧಿಕಾರಿಗಳನ್ನು ಬೆದರಿಸಿದ್ದರು. ಆಪ್ತನ ಕೈಯಲ್ಲಿದ್ದ ಪೆಟ್ರೋಲ್ ಬಾಟಲ್ ಅನ್ನು ಕಿತ್ತುಕೊಂಡು ಕಚೇರಿಯ ಕಡತಗಳಿರುವ ಕವಾಟಿಗೆ ನಾರಾಯಣ ಸ್ವಾಮಿ ಪೆಟ್ರೋಲ್ ಎರಚಿದ್ದರು. ಕೆ ಆರ್ ಪುರಂ ಶಾಸಕ ಭೈರತಿ ಬಸವರಾಜ್ ಅವರ ಆಪ್ತರಾಗಿರುವ ಜಲಮಂಡಳಿ ಸದಸ್ಯ ನಾರಾಯಣ ಸ್ವಾಮಿಯ ಗೂಂಡಾಗಿರಿ ವರ್ತನೆಯ ವಿಡಿಯೊ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿತ್ತು.