ರಾಜಮ್ಮ ಪೂಜೆ ಸಲ್ಲಿಸುತ್ತಿರುವ ರಾಜು
ಚಾಮರಾಜನಗರ: ತಮ್ಮ ನೆಚ್ಚಿನ ನಟ-ನಟಿಯರು ಹಾಗೂ ರಾಜಕಾರಣಿಗಳಿಗೆ ದೇವಾಲಯ ನಿರ್ಮಿಸುವ ಸಾಕಷ್ಟು ಅಂಧಾಭಿಮಾನಿಗಳಿದ್ದಾರೆ. ಆದರೆ, ಚಾಮರಾಜನಗರದಲ್ಲೊಬ್ಬ ರೈತ ತನ್ನ ಪತ್ನಿಯ ನೆನಪಿಗಾಗಿ ದೇವಾಲಯ ನಿರ್ಮಿಸಿ ಕಳೆದ 12 ವರ್ಷಗಳಿಂದ ನಿತ್ಯ ಪೂಜೆ ಸಲ್ಲಿಸುವ ಮೂಲಕ ಪತಿ-ಪತ್ನಿಯ ಸಂಬಂಧಕ್ಕೆ ನಿಜವಾದ ಅರ್ಥ ನೀಡಿದ್ದಾರೆ.
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಕೃಷ್ಣಪುರದ ನಿವಾಸಿ ರಾಜು ಅಲಿಯಾಸ್ ರಾಜುಸ್ವಾಮಿ ಎಂಬ ರೈತ ತನ್ನ ಪತ್ನಿ ರಾಜಮ್ಮ ಸಾವನ್ನಪ್ಪಿದ ನಂತರ ಸಮಾಧಿ ಬಳಿ ದೇವಸ್ಥಾನ ಕಟ್ಟಿಸಿ, ತನ್ನಾಕೆಯ ಪ್ರತಿಮೆಗೆ ಪ್ರತಿನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ.
ಸದ್ಯ, ಸುತ್ತಮುತ್ತಲಿನ ಗ್ರಾಮಸ್ಥರು ಕೃಷ್ಣಾಪುರ ಗ್ರಾಮಕ್ಕೆ ಭೇಟಿ ನೀಡುತ್ತಿದ್ದು, ಮಡದಿಗಾಗಿ ರೈತ ನಿರ್ಮಿಸಿರುವ ದೇಗುಲವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ರಾಜು ಮತ್ತು ರಾಜಮ್ಮ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದು, ಇರುವಷ್ಟು ದಿನಗಳ ಕಾಲ ಅನ್ಯೋನ್ಯವಾಗಿಯೂ ಜೀವನ ನಡೆಸುತ್ತಿದ್ದರು. ಆದರೆ ರಾಜಮ್ಮ ಅವರು ಅನಾರೋಗ್ಯದ ಕಾರಣ ನಿಧನರಾಗಿ ರಾಜು ಅವರಿಂದ ದೂರವಾದರು. ಆದರೆ ರಾಜು ತನ್ನ ಪ್ರೇಯಸಿಯ ಕೊನೆ ಆಸೆಯಂತೆ ಕೂಲಿ, ನಾಲಿ ಮಾಡಿ ದೇವಸ್ಥಾನ ಕಟ್ಟಿಸಿದ್ದರು. ಅಷ್ಟೆಕ್ಕೆ ಸುಮ್ಮನಿರದ ರಾಜು, ದೇವಸ್ಥಾನದ ಸಮೀಪದಲ್ಲೇ ತನ್ನ ಪ್ರೇಯಸಿಗೊಂದು ಗುಡಿಯ ಕಟ್ಟಿಸಿದರು. ಹಗಲಿರುಳೆನ್ನದೆ ತನ್ನ ಮಡದಿಯ ಪ್ರತಿಮೆಯನ್ನು ತಾವೇ ಕೆತ್ತಿ ಪ್ರತಿಷ್ಠಾಪನೆಯನ್ನೂ ಕೂಡ ಮಾಡಿದ್ದಾರೆ. ಪ್ರತಿನಿತ್ಯ ತನ್ನ ನೆಚ್ಚಿನ ಮಡದಿಗೆ ಪೂಜೆ ಸಲ್ಲಿಸಿದ ಬಳಿಕ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಆ ಮೂಲಕ ತನ್ನ ನೆಚ್ಚಿನ ಮಡದಿಯನ್ನು ಆರಾಧಿಸುತ್ತಿದ್ದಾರೆ.
ರಾಜು ಅವರು 2006ರಲ್ಲಿ ಪತ್ನಿ ರಾಜಮ್ಮ ದೇಗುಲ ನಿರ್ಮಾಣ ಮಾಡಿದ್ದು, ಗ್ರಾಮದಲ್ಲಿ ದೇವಾಲಯವೊಂದನ್ನು ಸ್ಥಾಪಿಸಬೇಕು ಎಂದು ಪತ್ನಿ ರಾಜಮ್ಮ ಆಸೆ ಪಟ್ಟಿದ್ದಳು. ಅವಳ ಆಸೆಯಂತೆ ದೇವಾಲಯ ನಿರ್ಮಾಣ ಕಾರ್ಯಕ್ಕೆ ಕೈ ಹಾಕಿದೆ. ದುರದೃಷ್ಟವಶಾತ್ ದೇಗುಲ ನಿರ್ಮಾಣಕ್ಕೂ ಮುನ್ನವೇ ಪತ್ನಿ ಶಿವನಪಾದ ಸೇರಿದಳು. ಪತ್ನಿಯ ಅಗಲಿಕೆಯನ್ನು ಸಹಿಸಲು ಸಾಧ್ಯವಿರಲಿಲ್ಲ. ಹೀಗಾಗಿ ದೇವಾಲಯದಲ್ಲಿ ಪತ್ನಿಯ ವಿಗ್ರಹವನ್ನು ಸ್ಥಾಪಿಸಿ ಆರಾಧಿಸುತ್ತಿದ್ದೇನೆ ಎಂದು ರಾಜು ವಿವರಿಸಿದ್ದಾರೆ.
ಪತ್ನಿಯ ಹೆಸರಲ್ಲಿ ದೇಗುಲ ನಿರ್ಮಾಣ ಮಾಡಲು ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಈ ಬಗ್ಗೆ ಗ್ರಾಮದಲ್ಲಿ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿದ್ದವು. ಆದರೆ, ಯಾವುದಕ್ಕೂ ಜಗ್ಗದೆ ಪತ್ನಿಯ ದೈವಶಕ್ತಿಯಿಂದ ದೇವಾಲಯ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ರೈತ ಹೇಳುತ್ತಾರೆ.
ರಾಜು ಶಿಲ್ಪಿಯಲ್ಲದಿದ್ದರೂ ತನ್ನ ಮಡದಿಯ ಪ್ರತಿಮೆಯನ್ನು ತಾವೇ ಕೆತ್ತಿದ್ದಾರೆ. ಮುಖದ ಭಾವಚಿತ್ರ ದೇವತೆ ಕುಳಿತುಕೊಳ್ಳುವ ರೀತಿಯಲ್ಲಿ ಪತ್ನಿ ಪ್ರತಿಮೆ ನಿರ್ಮಿಸಿರುವುದು ಗಮನ ಸೆಳೆಯುತ್ತದೆ. ಕಣ್ಣು, ಮೂಗೂತಿ, ಓಲೆ, ಬಳೆ, ಕಾಲುಂಗೂರ, ತಾಳಿ ಸೇರಿದಂತೆ ಎಲ್ಲವನ್ನೂ ಸುಂದರವಾಗಿ ನಿರ್ಮಿಸಿದ್ದಾರೆ.