ಬೆಂಗಳೂರು: ವಿದ್ವತ್ ಮೇಲೆ ಹಲ್ಲೆ ನಡೆಸಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಶಾಂತಿನಗರ ಶಾಸಕ ಎನ್ ಎ ಹ್ಯಾರಿಸ್ ಪುತ್ರ ಮೊಹಮದ್ ನಳಪಾಡ ಜೈಲಿನಲ್ಲಿಯೂ ಐಷಾರಾಮಿ ಜೀವನ ನಡೆಸಲು ಬಯಸುತ್ತಿದ್ದಾನೆ.
ಫರ್ಜಿ ಕೆಫೆಯಲ್ಲಿ ನಡೆದ ಹಲ್ಲೆ ಪ್ರಕರಣದ ಹಿನ್ನೆಲೆಯಲ್ಲಿ ಮಹಮದ್ ಮತ್ತು ಆತನ ಆರು ಸ್ನೇಹಿತರನ್ನು ಮೂರು ಸೆಲ್ ಗಳಲ್ಲಿ ಇರಿಸಲಾಗಿದೆ. ಮೂವರು ಒಂದು ಕೊಠಡಿಯಲ್ಲಿ ಇನ್ನು ಮೂವರು ಇನ್ನೆರಡು ಕೊಠಡಿಯಲ್ಲಿದ್ದಾರೆ, ಕೇವಲ ಊಟ ತಿಂಡಿಗಾಗಿ ಮಾತ್ರ ಈ ಆರು ಮಂದಿ ಹೊರಗೆ ಬರುತ್ತಾರೆ, ಉಳಿದಂತೆ ಸೆಲ್ ಒಳಗೆ ಇರುತ್ತಾರೆ, ಜೈಲು ಸಿಬ್ಬಂದಿ ಸೇರಿದಂತೆ ಯಾರೊಂದಿಗೂ ಹೆಚ್ಚು ಮಾತನಾಡುತ್ತಿಲ್ಲ ಎಂದು ಜೈಲು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬುಧವಾರ ರಾತ್ರಿ ಮೊಹಮದ್ ಜೈಲಿನ ಹಿರಿಯ ಪೊಲೀಸ್ ಅಧಿಕಾರಿಯೊರ್ವರ ಬಳಿ ಮಲಗಲು ಹಾಸಿಗೆ ನೀಡುವಂತೆ ಕೇಳಿದ್ದಾನೆ, ಇದರಿಂದ ಕೆರಳಿದ ಅಧಿಕಾರಿ ಇದು ಗೆಸ್ಟ್ ಹೌಸ್ ಅಲ್ಲ, ಜೈಲು ಎಂದು ಮೊಹಮದ್ ನೇರವಾಗಿ ಹೇಳಿದ್ದಾರೆ.ಮೊಹಮದ್ ಇದಕ್ಕೆ ಯಾವುದೇ ಪ್ರತಿಕ್ರಿಯಿ ನೀಡಿಲ್ಲ, ಸುಮ್ಮನೆ ಸದ್ದಿಲ್ಲದೇ ಇರು ಎಂದು ಅಧಿಕಾರಿ ಗದರಿದ್ದಾರೆ.,
ಇನ್ನು ನಟ ಶಿವರಾಜ್ ಕುಮಾರ್ ವಿದ್ವತ್ ಚಿಕಿತ್ಸೆ ಪಡೆಯುತ್ತಿರುವ ಮಲ್ಯ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ವಿಶೇಷ ದಿನಗಳಲ್ಲಿ ವಿದ್ವತ್ ನಮ್ಮ ಮನೆಗೆ ಬರುತ್ತಿದ್ದ ಎಂದು ಶಿವಣ್ಣ ಹೇಳಿದ್ದಾರೆ, ಬೆಂಗಳೂರು ಶಾಂತಿಯುತ ನಗರ ಎಂದು ಪ್ರಸಿದ್ದಿಯಾಗಿತ್ತು, ಆದರೆ ಈಗ ಏನಾಗುತ್ತಿದೆ ಎಂದು ಪ್ರಶ್ನಿಸಿರುವ ಅವರು, ಆರೋಪಿಗೆ ಶಿಕ್ಷೆಯಾಗಬೇಕು ಎಂದಿದ್ದಾರೆ.
ಬಿಜೆಪಿ ಮುಖಂಡ ಸಿಟಿ ರವಿ, ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಆಸ್ಪತ್ರೆಗೆ ಭೇಟಿ ನೀಡಿದ್ದರು, ಆದರೆ ವೈದ್ಯರು ವಿದ್ವತ್ ನೋಡಲು ಬಿಡಲಿಲ್ಲ.