ರಾಜ್ಯ

ಮಹಾಮಸ್ತಕಾಭಿಷೇಕ: 4 ವಿಶೇಷ ರೈಲುಗಳ ಸಂಚಾರ ರದ್ದು

Sumana Upadhyaya

ಬೆಂಗಳೂರು: ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ ಮಹಾಮಸ್ತಕಾಭಿಷೇಕಕಕ್ಕೆ ಹೋಗುವ ಭಕ್ತರಿಗೆ ಅನುಕೂಲವಾಗಲೆಂದು ಬೆಂಗಳೂರು ರೈಲ್ವೆ ವಿಭಾಗ ಪ್ರಯಾಣಿಕರಿಗೆ 4 ವಿಶೇಷ ರೈಲುಗಳ ಸಂಚಾರ ವ್ಯವಸ್ಥೆಯನ್ನು ಕೈಗೊಳ್ಳುವುದಾಗಿ ಫೆಬ್ರವರಿ 12ರಂದು ಘೋಷಿಸಿತ್ತು. ಆದರೆ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದೆ ಎಂದು ನಿನ್ನೆ ವಿಶೇಷ  ರೈಲು ಸಂಚಾರ ವ್ಯವಸ್ಥೆಯನ್ನು ರದ್ದುಗೊಳಿಸಿದೆ.

ಇಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿದ್ದು ಏನೆಂದರೆ ವಿಶೇಷ ರೈಲು ಹೊರಡಬೇಕಿದ್ದ ಸಮಯದ ಎರಡು ಗಂಟೆ ನಂತರ ಸಾರ್ವಜನಿಕರಿಗೆ ರೈಲು ಸಂಚಾರ ರದ್ದಾದ ವಿಷಯವನ್ನು ಘೋಷಿಸಿದ್ದು. ಸಾರ್ವಜನಿಕರಲ್ಲಿ ಒಂದು ಕ್ಷಮೆಯನ್ನು ಸಹ ಕೇಳದೆ ನಿನ್ನೆ ಬೆಳಗ್ಗೆ 11.30ರ ಸುಮಾರಿಗೆ ಬೆಂಗಳೂರು ರೈಲ್ವೆ ವಿಭಾಗದ ಸಾರ್ವಜನಿಕ ಸಂಪರ್ಕಾಧಿಕಾರಿ ಪತ್ರಿಕಾ ಹೇಳಿಕೆ ಹೊರಡಿಸಿ 4 ಡೆಮು ರೈಲುಗಳನ್ನು ಕಾರ್ಯನಿರ್ವಹಣೆ ಅಡಚಣೆಯಿಂದ ರದ್ದುಪಡಿಸಲಾಗಿದೆ ಎಂದು ಹೇಳಿದ್ದರು. ಮುಂದಿನ ಮಾಹಿತಿ ಬರುವವರೆಗೆ ಈ ರದ್ದು ಮುಂದುವರಿಯಲಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿತ್ತು.

ರೈಲು ಸಂಖ್ಯೆ 06559 ಯಶವಂತಪುರದಿಂದ ಶ್ರವಣಬೆಳಗೊಳಕ್ಕೆ ಬೆಳಗ್ಗೆ 5.15ಕ್ಕೆ ಹೊರಡಬೇಕಿತ್ತು. ಮತ್ತೊಂದು ರೈಲು ಸಂಖ್ಯೆ 06561 ಶ್ರವಣಬೆಳಗೊಳದಿಂದ ಹಾಸನಕ್ಕೆ ಬೆಳಗ್ಗೆ 9.15ಕ್ಕೆ ಹೊರಡಬೇಕಿತ್ತು. ರೈಲು ಸಂಖ್ಯೆ 06558 ಹಾಸನದಿಂದ ಶ್ರವಣಬೆಳಗೊಳಕ್ಕೆ ಹೋಗುವ ಡೆಮು ವಿಶೇಷ ರೈಲು ಸಾಯಂಕಾಲ 6.20ಕ್ಕೆ ಹೊರಡಬೇಕಾಗಿದ್ದು, 06556 ಶ್ರವಣಬೆಳಗೊಳದಿಂದ ಯಶವಂತಪುರಕ್ಕೆ ಸಾಯಂಕಾಲ 7.20ಕ್ಕೆ ಹೊರಡಬೇಕಿದ್ದ ರೈಲು ಕೂಡ ರದ್ದಾಗಿವೆ. ಈ ಎಲ್ಲಾ ರೈಲುಗಳಲ್ಲಿ ಕಾಯ್ದಿರಿಸದ ಟಿಕೆಟ್ ರಹಿತ ಪ್ರಯಾಣವಾಗಿದೆ.

ಸಾರ್ವಜನಿಕರಿಗೆ ಮುನ್ಸೂಚನೆ ನೀಡದೆ ಏಕಾಏಕಿ ರೈಲು ಸಂಚಾರವನ್ನು ರದ್ದುಮಾಡಿದ್ದೇಕೆ ಎಂದು ಕೇಳಿದಾಗ, ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲ, ಹೀಗಾಗಿ ಅವರ ಮೇಲೆ ಅಷ್ಟೊಂದು ಪರಿಣಾಮ ಬೀರುವುದಿಲ್ಲ ಎಂಬ ಉತ್ತರ ಬಂದಿದೆ.

SCROLL FOR NEXT