ಮಹಾತ್ಮ ಗಾಂಧಿ ಮತ್ತು ಪ್ರಧಾನಿ ಮೋದಿಯಂತೆ ಡ್ರೆಸ್ ಮಾಡಿಕೊಂಡಿರುವ ವ್ಯಕ್ತಿಗಳು
ಶ್ರವಣಬೆಳಗೊಳ: ಕಳೆದ ವಾರ ಶ್ರವಣ ಬೆಳಗೊಳದ ಮಹಾ ಮಸ್ತಾಭಿಷೇಕಕ್ಕೆ ಆಗಮಿಸಿ ಕೆಲವೇ ಗಂಟೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ವಾಪಸ್ ತೆರಳಿದ್ದರು, ಹೀಗಾಗಿ ಮೋದಿಯನ್ನು ನೋಡಬೇಕೆಂದಿದ್ದ ಭಕ್ತರಲ್ಲಿ ನಿರಾಸೆ ಮೂಡಿಸಿತ್ತು.
ಆದರೆ ಶುಕ್ರವಾರ ಮೋದಿ ಅಭಿಮಾನಿಗಳು ವಿಂದ್ಯಾಗಿರಿ ಬೆಟ್ಟದಲ್ಲಿ ಮತ್ತೆ ಮೋದಿಯನ್ನು ನೋಡಿ ಖುಷಿಯಾದರು. ಉಡುಪಿ ಮೂಲದ ಸದಾನಂದ ನಾಯಕ್ ಶ್ರವಣಬೆಳಗೊಳದಲ್ಲಿ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾದರು.ಥೇಟ್ ಮೋದಿಯಂತೆ ಕಾಣುವ ಸದಾನಂದ್ ನಾಯಕ್ ನೋಡಲು ಜನರು ಮುಗಿ ಬಿದ್ದರು.ಸ್ಥಳಕ್ಕೆ ಬಂದ ಪೊಲೀಸರು ಗುಂಪನ್ನು ಚದುರಿಸಿ ಭಕ್ತರು ವಿಂದ್ಯಾಗಿರಿ ಬೆಟ್ಟ ಹತ್ತಲು ಅನುವು ಮಾಡಿಕೊಟ್ಟರು.
ಬಿಜೆಪಿ ಸಮಾವೇಶ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿಯಂತೆ ಕಾಣುವ ಸದಾನಂದ ನಾಯಕ್ ಜನಪ್ರಿಯರಾಗಿದ್ದಾರೆ,ಕಳೆದ 25 ವರ್ಷಗಳಿಂದ ನಾನು ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದೇನೆ, ಒಮ್ಮೆ ನಾನು ಹರಿದ್ವಾರಕ್ಕೆ ರೈಲಿನಲ್ಲಿ ತೆರಳುತ್ತಿದ್ದೆ, ರೈಲಿನಲ್ಲಿ ನನ್ನನ್ನು ಭೇಟಿ ಮಾಡಿದ ಹಲವರು ನಾನು ಮೋದಿಯಂತೆ ಕಾಣಿಸುತ್ತೇನೆ ಎಂದು ಹೇಳಿದರು.
ನಂತರ ಉಜಿರೆಯಲ್ಲಿ ಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದ ವೇಳೆ ನಾನು ಮೋದಿ ಅವರಂತೆ ಡ್ರೆಸ್ ಮಾಡಿಕೊಂಡೆ, ಅಲ್ಲಿಂದ ನಾನು ಹಿಂದಿರುಗಿ ನೋಡಲೇ ಇಲ್ಲ, ಇತ್ತೀಚೆಗೆ ನಡೆದ ಗುಜರಾತ್ ವಿಧಾನ ಸಭೆ ಚುನಾವಣೆ ಪ್ರಚಾರದಲ್ಲೂ ಕೂಡ ಪಾಲ್ಗೊಂಡಿದ್ದೆ, ಜೊತೆಗ ಮೋದಿ ಅವರ ಹಲವು ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದೇನೆ ಎಂದು ಹೇಳಿದ್ದಾರೆ.
ಇನ್ನೂ ಶ್ರವಣ ಬೆಳಗೊಳದಲ್ಲಿ ಜನ ಮೋದಿ ಮೇನಿಯಾದಲ್ಲಿರುವಾಗಲೇ ಮಹಾತ್ಮ ಗಾಂಧಿ ಕೂಡ ಎಲ್ಲರ ಗಮನ ಸೆಳೆದರು, ಗೋವಾ ಮೂಲದ ಅಗಸ್ಟೈನ್ ಡಿ ಅಲಮೈಡಾ ಬಾಪುವಂತೆ ಡ್ರೆಸ್ ಮಾಡಿಕೊಂಡಿದ್ದರು. ಹಲವು ಮಂದಿ ಅವರಜೊತೆ ಫೋಟೋ ಕ್ಲಿಕ್ಕಿಸಿಕೊಂಡರು.