ಬಾಗಲಕೋಟೆ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜನಾಶೀರ್ವಾದ ಯಾತ್ರೆ ಮುಗಿಸಿಕೊಂಡು ವೇದಿಕೆಯಿಂದ ಹೊರಹೋಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಮಾರಿ ನಡೆದಿದೆ.
ಬಾಗಲಕೋಟೆಯ ಬೀಳಗಿ ಪಟ್ಟಣದಲ್ಲಿ ನಡೆದ ಜನಾಶೀರ್ವಾದ ಯಾತ್ರೆಯಲ್ಲಿ ಬ್ಯಾನರ್ ಬಿಚ್ಚಿಕೊಳ್ಳುವ ವಿಚಾರವಾಗಿ ನಡೆದ ಜಗಳದಲ್ಲಿ ಇಬ್ಬರು ಕಾರ್ಯಕರ್ತರ ತಲೆಗೆ ಗಂಭೀರ ಗಾಯಗಳಾಗಿವೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಕಾರ್ಯಕರ್ತರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜನಾಶೀರ್ವಾದ ಯಾತ್ರೆಗಾಗಿ ಬೀಳಗಿ ಪಟ್ಟಣದ ಅಕ್ಕಪಕ್ಕದ ರಸ್ತೆಯಲ್ಲಿ ಕಟ್ಟಿದ್ದ ಬ್ಯಾನರ್ ಗಳಿಗಾಗಿ ಬೀಳಗಿ ಮತ್ತು ಕೊರ್ತಿ ಗ್ರಾಮದ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ. ಇದು ವಿಕೋಪಕ್ಕೆ ತಿರುಗಿ ಉಂಟಾದ ಗಲಾಟೆಯಲ್ಲಿ ಎರಡೂ ಕಡೆಯ ಇಬ್ಬರು ಕಾರ್ಯಕರ್ತರ ತಲೆಗೆ ಗಾಯವಾಗಿದೆ.