ಕಲಬುರ್ಗಿ: ಸಿದ್ದರಾಮಯ್ಯ ಹಾಗೂ ಭ್ರಷ್ಟಾಚಾರ ಎರಡೂ ಸಮಾನಾರ್ಥಕ ಶಬ್ದಗಳಾಗಿವೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಲೇವಡಿ ಮಾಡಿದ್ದಾರೆ.
ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸಕ್ಕೆ ಆಗಮಿಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಕಲಬುರ್ಗಿಯಲ್ಲಿ ಮಾತನಾಡಿದ್ದು, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಎಲ್ಲಾ ರಂಗಗಳಲ್ಲಿಯೂ ವಿಫಲವಾಗಿದೆ, ರಾಜ್ಯದಲ್ಲಿ ಭ್ರಷ್ಟಾಚಾರದ ಪ್ರಕರಣಗಳು ಹೆಚ್ಚುತ್ತಿವೆ. ಸಿದ್ದರಾಮಯ್ಯ ಅಂದರೆ ಭ್ರಷ್ಟಾಚಾರ, ಭ್ರಷ್ಟಾಚಾರವೆಂದರೆ ಸಿದ್ದರಾಮಯ್ಯ ಎನ್ನುವಷ್ಟರ ಮಟ್ಟಿಗೆ ಈ ಎರಡೂ ಶಬ್ದಗಳು ಅನ್ವರ್ಥವಾಗಿವೆ ಎಂದು ಹೇಳಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳ ವಿಷಯದಲ್ಲಿ ಸಿಎಂ ಸಿದ್ದರಾಮಯ್ಯ ಸಂವೇದನೆಯಿಂದ ನಡೆದುಕೊಂಡಿಲ್ಲ. ಅಪರಾಧ ಪ್ರಕರಣಗಳಲ್ಲಿ ಆರೋಪ ಎದುರಿಸುತ್ತಿರುವ ಪಿಎಫ್ಐ ಹಾಗೂ ಎಸ್ ಡಿಪಿಐ ನಂತಹ ಸಂಘಟನೆಗಳ ವಿರುದ್ಧದ ಪ್ರಕರಣಗಳನ್ನು ವಾಪಸ್ ಪಡೆದಿರುವುದು ಸಿದ್ದರಾಮಯ್ಯನವರ ಪಕ್ಷಪಾತ ಧೋರಣೆಯನ್ನು ತೋರುತ್ತದೆ ಎಂದು ಅಮಿತ್ ಶಾ ಹೇಳಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧವೂ ವಾಗ್ದಾಳಿ ನಡೆಸಿರುವ ಅಮಿತ್ ಶಾ, ಮಲ್ಲಿಕಾರ್ಜುನ ಖರ್ಗೆ ತಮ್ಮದೇ ಕ್ಷೇತ್ರವನ್ನು ಅಭಿವೃದ್ಧಿಪಡಿಸಿಲ್ಲ. ಕಾಂಗ್ರೆಸ್ ನ ಆಡಳಿತವನ್ನು ನೋಡಬೇಕೆಂದರೆ ಮಲ್ಲಿಕಾರ್ಜುನ ಖರ್ಗೆಯವರ ಕ್ಷೇತ್ರವನ್ನೊಮ್ಮೆ ನೋಡಿಕೊಂಡು ಬನ್ನಿ ಎಂದು ಅಮಿತ್ ಶಾ ಹೇಳಿದ್ದಾರೆ.