ಬೆಂಗಳೂರು: ರಾಜಕೀಯ ಪಕ್ಷಗಳು ತಮ್ಮ ಭಿನ್ನಾಭಿಪ್ರಾಯವನ್ನು ಮರೆತು ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳನ್ನು ಅಭಿವೃದ್ಧಿ ಪಡಿಸಲು ಮುಂದಾಗಬೇಕು ಎಂದು ನೀತಿ ಆಯೋಗ ತಿಳಿಸಿದೆ.
ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ. ಸದಾನಂದಗೌಡ, ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್, ಗ್ರಾಮೀಣ ನೈರ್ಮಲ್ಯ ಖಾತೆ ರಾಜ್ಯ ಸಚಿವ ರಮೇಶ ಜಿಗಜಿಣಗಿ ಅವರು ವಿಧಾನಸೌಧದಲ್ಲಿ ಸೋಮವಾರ ಈ ಕುರಿತ ಮೊದಲ ಸಭೆ ನಡೆಸಿದರು.
ಸಭೆ ಬಳಿಕ ಮಾತನಾಡಿದ ಸದಾನಂದಗೌಡ, ದೇಶದಲ್ಲಿ 115 ಜಿಲ್ಲೆಗಳು ಅಭಿವೃದ್ಧಿಯಿಂದ ದೂರ ಉಳಿದಿರುವುದನ್ನು ನೀತಿ ಆಯೋಗ ಗುರುತಿಸಿದೆ. ಉಳಿದ ಜಿಲ್ಲೆಗಳ ರೀತಿಯಲ್ಲಿ ಈ ಜಿಲ್ಲೆಗಳನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸುವಂತೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ ಎಂದು ತಿಳಿಸಿದರು.
ಈ ಜಿಲ್ಲೆಗಳ ಸ್ಥಿತಿಗತಿ ಕುರಿತು 70 ಸೂಚ್ಯಂಕಗಳನ್ನು ಮೊದಲು ಗುರುತಿಸಲಾಗುವುದು. ಯಾವ ಕ್ಷೇತ್ರದಲ್ಲಿ ಹಿಂದುಳಿದಿದೆ ಎಂಬ ಬಗ್ಗೆ ತಲಸ್ಪರ್ಶಿ ಪರಿಶೀಲನೆ ನಡೆಸಿದ ನಂತರ ಯೋಜನೆ ಸಿದ್ಧಪಡಿಸಲಾಗುವುದು. ಶಿಕ್ಷಣ, ಆರೋಗ್ಯ, ಮೂಲಸೌಕರ್ಯ, ಕೃಷಿ ಹಾಗೂ ಆರ್ಥಿಕ ಒಳಗೊಳ್ಳುವಿಕೆ ಹೀಗೆ ಐದು ಕ್ಷೇತ್ರಗಳಿಗೆ ಆದ್ಯತೆ ನೀಡಿ ಏಪ್ರಿಲ್ ಅಂತ್ಯದ ಹೊತ್ತಿಗೆ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಅನುದಾನಗಳನ್ನು ಒಗ್ಗೂ ಡಿಸಿ ಆದ್ಯತಾ ವಲಯಗಳಿಗೆ ವೆಚ್ಚ ಮಾಡಲಾಗುತ್ತದೆ. ರಾಜ್ಯ ಅಥವಾ ಕೇಂದ್ರ ಸಚಿವರ ಹಸ್ತಕ್ಷೇಪ ಇಲ್ಲದಂತೆ ಅಭಿವೃದ್ಧಿಯ ಮುನ್ನೋಟ ಸಿದ್ಧಪಡಿಸಿ, ಅನುಷ್ಠಾನ ಮಾಡುವುದು ಈ ಯೋಜನೆಯ ಆಶಯ ಎಂದರು.
ಒಟ್ಟು ಹಂಚಿಕೆಯಾಗುವ ಅನುದಾನದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ತಲಾ ಶೇ 30ರಷ್ಟು, ಉಳಿದ ಶೇ 40ರಷ್ಟನ್ನು ಇನ್ನಿತರ ಮೂರು ಕ್ಷೇತ್ರಗಳಿಗೆ ಖರ್ಚು ಮಾಡಲು ಅವಕಾಶ ಇರುತ್ತದೆ. ಈ ಜಿಲ್ಲೆಗಳಿಗೆ ಆದ್ಯತೆ ನೀಡಿ ಖರ್ಚು ಮಾಡಲು ಸರ್ಕಾರದ ನೀತಿ ಮತ್ತು ಆದೇಶಗಳಲ್ಲಿ ಬದಲಾವಣೆ ಮಾಡಿಕೊಳ್ಳಲಾಗುವುದು ಎಂದರು.