2nd PUC exam 2026-ಇಂದಿನಿಂದ ದ್ವಿತೀಯ ಪಿಯು ಪರೀಕ್ಷೆ-1: 7 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ನೋಂದಣಿ, ಸಾವಿರಕ್ಕೂ ಅಧಿಕ ಮಕ್ಕಳಿಗೆ ನಿರಾಕರಣೆ

ಮಾ.17ರವರೆಗೆ ನಡೆಯುವ ಪರೀಕ್ಷೆಗೆ ರಾಜ್ಯಾದ್ಯಂತ 1,217 ಕೇಂದ್ರಗಳನ್ನು ಗುರುತಿಸಲಾಗಿದ್ದು ಯಾವುದೇ ಅಕ್ರಮ, ಗೊಂದಲಗಳಿಗೆ ಅವಕಾಶವಾಗದೆ ಸುಸೂತ್ರವಾಗಿ ಪರೀಕ್ಷೆ ನಡೆಸಲು ಸಕಲ ಸಿದ್ಧತೆ ಹಾಗೂ ಭದ್ರತಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ತಿಳಿಸಿದೆ.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸುವ ದ್ವಿತೀಯ ಪಿಯುಸಿ ಪರೀಕ್ಷೆ ಇಂದು ಫೆ.28ರಿಂದ ರಾಜ್ಯಾದ್ಯಂತ ಆರಂಭವಾಗುತ್ತಿದೆ, ಈ ಬಾರಿ 7,10,363 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.

ಮಾ.17ರವರೆಗೆ ನಡೆಯುವ ಪರೀಕ್ಷೆಗೆ ರಾಜ್ಯಾದ್ಯಂತ 1,217 ಕೇಂದ್ರಗಳನ್ನು ಗುರುತಿಸಲಾಗಿದ್ದು ಯಾವುದೇ ಅಕ್ರಮ, ಗೊಂದಲಗಳಿಗೆ ಅವಕಾಶವಾಗದೆ ಸುಸೂತ್ರವಾಗಿ ಪರೀಕ್ಷೆ ನಡೆಸಲು ಸಕಲ ಸಿದ್ಧತೆ ಹಾಗೂ ಭದ್ರತಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ತಿಳಿಸಿದೆ.

ಪರೀಕ್ಷೆಗೆ ನೋಂದಾಯಿಸಿರುವ 7.10 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು

ಪರೀಕ್ಷೆಗೆ ನೋಂದಾಯಿಸಿರುವ 7.10 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ 6,46,801 ತರಗತಿ ವಿದ್ಯಾರ್ಥಿಗಳು ಪ್ರಥಮ ಬಾರಿಗೆ ಪರೀಕ್ಷೆ ಬರೆಯುವವರಾಗಿದ್ದಾರೆ, 50,540 ಪುನರಾವರ್ತಿತ, 13,022 ಖಾಸಗಿ ಅಭ್ಯರ್ಥಿಗಳಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು 2,92,645 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 2,11,174, ಕಲಾ ವಿಭಾಗದಲ್ಲಿ 1,42,982 ಮಂದಿ ನೋಂದಾಯಿಸಿದ್ದಾರೆ ಎಂದು ಮಂಡಳಿ ತಿಳಿಸಿದೆ.

ತೀವ್ರ ಭದ್ರತೆ, ಕಣ್ಗಾವಲು

ಎಲ್ಲಾ ಪರೀಕ್ಷಾ ಕೊಠಡಿಗಳಲ್ಲೂ ಸಿಸಿ ಟಿವಿ ಕಣ್ಗಾವಲು ಮತ್ತು ಜಿಲ್ಲಾ ಕೇಂದ್ರದಲ್ಲಿ ಯಾವುದೇ ಕೇಂದ್ರದ ಯಾವುದೇ ಕೊಠಡಿ ವ್ಯವಸ್ಥೆಯನ್ನು ವೀಕ್ಷಿಸಬಹುದಾದ ವೆಬ್‌ಕಾಸ್ಟಿಂಗ್‌ ವ್ಯವಸ್ಥೆ ಈ ಬಾರಿಯೂ ಜಾರಿಯಲ್ಲಿದೆ.

ಜಿಲ್ಲಾಧಿಕಾರಿಗಳು, ಜಿಪಂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು, ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಸೇರಿ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಜೊತೆ ಸಭೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ವದಂತಿ ಹಬ್ಬಿಸಿದರೆ ತಕ್ಷಣ ದೂರು

ಪ್ರಶ್ನೆಪತ್ರಿಕೆ ಸೋರಿಕೆ ವದಂತಿ ಹಬ್ಬಿಸುವುದು ಅಥವಾ ನಕಲಿ ಪ್ರಶ್ನೆಪತ್ರಿಕೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವಂಥವರ ಮೇಲೆ ನಿಗಾ ಇರಿಸಲಾಗುತ್ತದೆ. ಅಕ್ರಮ ಎಸಗಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವವರ ಮೇಲೆ ತಕ್ಷಣ ದೂರು ದಾಖಲಿಸಲು ರಾಜ್ಯಮಟ್ಟದಲ್ಲಿ ನೋಡಲ್ ಅಧಿಕಾರಿಯೊಬ್ಬರನ್ನು ನೇಮಿಸುತ್ತಿದ್ದೇವೆ. ಜೊತೆಗೆ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲೂ ತಕ್ಷಣ ದೂರು ನೀಡಲು ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಯಾವುದೇ ಅಕ್ರಮಗಳಿಗೆ ಅವಕಾಶವಿಲ್ಲದೆ, ಅತ್ಯಂತ ಪಾರದರ್ಶಕ ಹಾಗೂ ಸುಸೂತ್ರವಾಗಿ ನಡೆಸಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು, ಪೋಷಕರು ಯಾವುದೇ ವದಂತಿಗಳಿಗೆ ಕಿವಿಗೊಡದೆ ತಮ್ಮ ಮಕ್ಕಳನ್ನು ಏಕಾಗ್ರತೆಯಿಂದ ಪರೀಕ್ಷಾ ಸಿದ್ಧತೆಗೆ ಪ್ರೋತ್ಸಾಹಿಸಬೇಕು ಎಂದು ಶಿಕ್ಷಣ ಮಂಡಳಿ ಮನವಿ ಮಾಡಿದೆ.

ಹಾಜರಾತಿ ಕೊರತೆ, ಪರೀಕ್ಷೆಗೆ ಅನುಮತಿ ನಿರಾಕರಣೆ

ದ್ವಿತೀಯ ಪಿಯು ಪರೀಕ್ಷೆಗಳಿಗೆ 75% ಹಾಜರಾತಿ ಕಡ್ಡಾಯವಿಲ್ಲದ ಕಾರಣ 1,005 ವಿದ್ಯಾರ್ಥಿಗಳಿಗೆ ಈ ವರ್ಷ ಪರೀಕ್ಷೆ ಬರೆಯಲು ಸಾಧ್ಯವಾಗುವುದಿಲ್ಲ. Karnataka School Examination and Assessment Board (KSEAB) ಹಾಗೂ ಪಿಯು ಶಿಕ್ಷಣ ಇಲಾಖೆಯು ನಿಗದಿಪಡಿಸಿದ ನಿಯಮಾವಳಿಗಳ ಪ್ರಕಾರ, 75% ಕ್ಕಿಂತ ಕಡಿಮೆ ಹಾಜರಾತಿ ಹೊಂದಿದ್ದ ವಿದ್ಯಾರ್ಥಿಗಳಿಗೆ ಹಾಲ್‌ ಟಿಕೆಟ್‌ಗಳನ್ನು ನೀಡುವುದಿಲ್ಲ.

ಆದರೆ, ಹಾಜರಾತಿ ಕೊರತೆಯಿಂದ ಪರೀಕ್ಷೆಗೆ ಹಾಜರಾಗದ ವಿದ್ಯಾರ್ಥಿಗಳ ಸಂಖ್ಯೆ ಈ ವರ್ಷ ಗಮನಾರ್ಹವಾಗಿ ಕಡಿಮೆಯಾಗಿದೆ – 2025ರಲ್ಲಿ ಹಾಜರಾತಿ ಕೊರತೆಯಿಂದ 6,547 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಾಧ್ಯವಾಗಿರಲಿಲ್ಲ.

ಮೊದಲ ಹಂತದ ಪರೀಕ್ಷೆಗೆ ಹಾಜರಾಗುವ ಅವಕಾಶ ಕಳೆದುಕೊಂಡ ವಿದ್ಯಾರ್ಥಿಗಳು, ಖಾಸಗಿ ಅಭ್ಯರ್ಥಿಗಳಾಗಿ ಎರಡನೇ ಮತ್ತು ಮೂರನೇ ಹಂತದ ಪರೀಕ್ಷೆಗಳಿಗೆ ಹಾಜರಾಗಲು ಅವಕಾಶವಿದೆ.

ಅನಾರೋಗ್ಯದ ಕಾರಣದಿಂದ ಗೈರುಹಾಜರಾಗಿದ್ದ ವಿದ್ಯಾರ್ಥಿಗಳ ಪ್ರಕರಣಗಳಲ್ಲಿ ಹಾಜರಾತಿ ಕೊರತೆಯನ್ನು ಮನ್ನಾ ಮಾಡುವ ವ್ಯವಸ್ಥೆ ಇದೆ. ಕಾಲೇಜು ಪ್ರಾಂಶುಪಾಲರು ಹಂಚಿಕೊಂಡ ವಿದ್ಯಾರ್ಥಿಗಳ ಪಟ್ಟಿಯಲ್ಲಿ ಹೆಸರು ಇರದವರಿಗೆ ಹಾಲ್‌ ಟಿಕೆಟ್‌ಗಳನ್ನು ನೀಡಲಾಗಿಲ್ಲ ಎಂದು ಪಿಯು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪರೀಕ್ಷಾ ದಿನಾಂಕ ಇಂತಿದೆ

* ಫೆಬ್ರವರಿ 28- ಕನ್ನಡ, ಅರೇಬಿಕ್

* ಮಾರ್ಚ್ 2- ಭೂಗೋಳ ಶಾಸ್ತ್ರ, ಸಂಖ್ಯಾಶಾಸ್ತ್ರ, ಮನಃಶಾಸ್ತ್ರ.

* ಮಾರ್ಚ್ 3- ಇಂಗ್ಲಿಷ್‌

* ಮಾರ್ಚ್ 4- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್.

* ಮಾರ್ಚ್ 5- ಇತಿಹಾಸ

* ಮಾರ್ಚ್ 6- ಭೌತಶಾಸ್ತ್ರ

* ಮಾರ್ಚ್ 7- ಐಚ್ಛಿಕ ಕನ್ನಡ, ವ್ಯವಹಾರ ಅಧ್ಯಯನ, ಭೂಗರ್ಭ ಶಾಸ್ತ್ರ

* ಮಾರ್ಚ್ 9- ರಸಾಯನಶಾಸ್ತ್ರ, ಶಿಕ್ಷಣಶಾಸ್ತ್ರ, ಮೂಲ ಗಣಿತ

* ಮಾರ್ಚ್ 10- ಅರ್ಥಶಾಸ್ತ್ರ

* ಮಾರ್ಚ್ 11- ತರ್ಕಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗೃಹ ವಿಜ್ಞಾನ

* ಮಾರ್ಚ್ 12- ಹಿಂದಿ

* ಮಾರ್ಚ್ 13- ರಾಜ್ಯಶಾಸ್ತ್ರ

* ಮಾರ್ಚ್ 14- ಲೆಕ್ಕಶಾಸ್ತ್ರ, ಗಣಿತ

* ಮಾರ್ಚ್ 16-ಸಮಾಜಶಾಸ್ತ್ರ, ಜೀವಶಾಸ್ತ್ರ, ಗಣಕ ವಿಜ್ಞಾನ.

* ಮಾರ್ಚ್ 17- ಹಿಂದುಸ್ತಾನಿ, ಸಂಗೀತ, ರೀಟೇಲ್ ಆಟೋಮೊಬೈಲ್, ಆರೋಗ್ಯ ರಕ್ಷಣೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com