ತುಮಕೂರು: ಮಧುಗಿರಿ ತಾಲೂಕಿನ ಮಿಡಿಗೇಶಿ ಬಳಿ ಕಾರೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಮದುವೆ ನಿಶ್ಚಯವಾಗಿದ್ದ ಮಧುಮಗ ಮತ್ತು ಆತನ ತಾಯಿ ದಾರುಣ ಸಾವನ್ನಪ್ಪಿರುವ ಘಟನೆ ನಡೆದಿದೆ.
ಜನವರಿ 22ರಂದು 26 ವರ್ಷದ ಮೃತ ಮಂಜುನಾಥ ಹಸೆಮಣೆ ಹೇರಬೇಕಿತ್ತು. ಆದರೆ ವಿಧಿಯಾಟ ಬೇರೆಯೇ ಇತ್ತು. ಮಂಜುನಾಥ್ ಮತ್ತು ಆತನ ತಾಯಿ 48 ವರ್ಷದ ಕಂಬಕ್ಕ ಇಬ್ಬರು ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಹಿಂದಿರುಗುವಾಗ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಬೈಕ್ ನಲ್ಲಿ ತಾಯಿ ಮತ್ತು ಮಗ ಇಬ್ಬರು ಬಂಧು ಮಿತ್ರರಿಗೆ ಆಹ್ವಾನ ಪತ್ರಿಕೆ ಹಂಚುತ್ತಿದ್ದರು. ಮಧುಗಿರಿ-ಪಾವಗಡ ನಡುವಿನ ಕೆಶಿಪ್ ರಸ್ತೆಯ ಪಡಸಾಲಹಟ್ಟಿ ಬಸ್ ತಂಗುದಾಣದ ಬಲಿ ಬೈಕ್ ಗೆ ಕಾರು ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ತಾಯಿ ಕಂಬಕ್ಕ ಸ್ಥಳದಲ್ಲೇ ಮೃತಪಟ್ಟಿದ್ದು ಮಧುಮಗ ಮಂಜುನಾಥ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.