ಬೆಂಗಳೂರು: ನಗರದ ಪ್ರಮುಖ ಪ್ರದೇಶಗಳಲ್ಲಿ ಮೇಲ್ಛಾವಣಿ ಮೇಲೆ ಪಬ್, ಬಾರ್ , ರೆಸ್ಟೊರೆಂಟ್ ಗಳು ಹೆಚ್ಚಾಗುತ್ತಿರುವ ಇತ್ತೀಚಿನ ದಿನಗಳಲ್ಲಿ ಅವುಗಳು ಸೂಕ್ತ ನಿಯಮಗಳನ್ನು ಪಾಲಿಸಲು ಅಗ್ನಿಶಾಮಕ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ನಗರದಾದ್ಯಂತ ರೂಫ್ ಟಾಪ್ ಪಬ್, ಬಾರ್ ಗಳು ನಿಯಮ ಉಲ್ಲಂಘಿಸಿ ಚಟುವಟಿಕೆ ನಡೆಸುತ್ತಿವೆಯೇ ಎಂದು ಪರೀಕ್ಷೆ ನಡೆಸುತ್ತಿದೆ.ನಿಯಮ ಉಲ್ಲಂಘಿಸಿರುವ ಪಬ್, ಬಾರ್ ಗಳಿಗೆ ಇಲಾಖೆ ನೊಟೀಸ್ ನೀಡಲಿದೆ ಇಲ್ಲವೇ ಮುಚ್ಚುವಂತೆ ಆದೇಶ ನೀಡಲಿದೆ.
ಮೊನ್ನೆ ಬುಧವಾರದವರೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 57 ಮೇಲ್ಛಾವಣಿಯ ಔಟ್ ಲೆಟ್ ಗಳನ್ನು ಮುಚ್ಚುವಂತೆ ಆದೇಶಿಸಿದ್ದು ಅವುಗಳಲ್ಲಿ ಬಹುತೇಕ ಪಬ್ ಮತ್ತು ಬಾರ್ ಗಳಾಗಿವೆ.
ಇದರೊಟ್ಟಿಗೆ ಅಗ್ನಿಶಾಮಕ ಮತ್ತು ತುರ್ತು ಸೇವೆ ಇಲಾಖೆ 70 ಔಟ್ ಲೆಟ್ ಗಳಿಗೆ ನೊಟೀಸ್ ನೀಡಿದೆ. ಮುಂಬೈಯ ಕಮಲಾ ಮಿಲ್ಸ್ ಕಾಂಪ್ಲೆಕ್ಸ್ ನಲ್ಲಿ ಕಳೆದ ವಾರ ನಡೆದ ಅಗ್ನಿ ದುರ್ಘಟನೆ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಅಗ್ನಿಶಾಮಕ ಮತ್ತು ತುರ್ತುಸೇವೆ ಇಲಾಖೆಯ ಎಂ.ಎನ್.ರೆಡ್ಡಿ ಮಾತನಾಡಿ, ಅಗ್ನಿಶಾಮಕ ಇಲಾಖೆಯ ನಿಯಮವನ್ನು ಪಾಲಿಸಲು ಪಬ್ ಗಳಿಗೆ 15 ದಿನಗಳ ಕಾಲಾವಕಾಶ ನೀಡಲಾಗಿದೆ. ಅಷ್ಟು ದಿನಗಳೊಳಗೆ ನಿಯಮ ಈಡೇರಿಸದಿದ್ದರೆ ಮುಚ್ಚಲು ಆದೇಶಿಸಲಾಗುವುದು ಎಂದರು. ಅಗ್ನಿಶಾಮಕ ಇಲಾಖೆಯ ಲೆಕ್ಕಪರಿಶೋಧನೆ ಭಾಗವಾಗಿ ಈ ಕಾರ್ಯಾಚರಣೆ ನಡೆಯುತ್ತಿದೆ ಎಂದು ಹೇಳಿದರು.
ಬಿಬಿಎಂಪಿಯ ಆರೋಗ್ಯ ಇನ್ಸ್ ಪೆಕ್ಟರ್ ಗೆ ತಮ್ಮ ವಲಯಗಳಲ್ಲಿನ ಮಳಿಗೆಗಳ ವರದಿ ಸಲ್ಲಿಸಲು ಮೂರು ದಿನಗಳ ಕಾಲಾವಕಾಶ ನೀಡಲಾಗಿದ್ದು, ನಿಯಮ ಉಲ್ಲಂಘಿಸುವ ಮಳಿಗೆಗಳಿಗೆ ನೊಟೀಸ್ ಕಳುಹಿಸಲಾಗುವುದು. ಕಲ್ಯಾಣ ನಗರದ ರಾಸ್ತಾ, ಬಾಣಸವಾಡಿಯ ಒನೆಸ್ಟಾ, ವಿಠಲ್ ಮಲ್ಯ ರಸ್ತೆಯಲ್ಲಿರುವ ಅಟ್ಟಿಕಾ ಮತ್ತು ಲ್ಯಾವೆಲ್ಲೆ ರಸ್ತೆಯಲ್ಲಿರುವ ಲೇಡಿ ಬಾಗಾ ರೆಸ್ಟೊರೆಂಟ್ ಗಳನ್ನು ಕೂಡಲೇ ಮುಚ್ಚುವಂತೆ ಆದೇಶಿಸಲಾಗಿದೆ ಎಂದು ಮೇಯರ್ ಸಂಪತ್ ರಾಜ್ ತಿಳಿಸಿದ್ದಾರೆ.ಒನೆಸ್ಟಾದಲ್ಲಿ ಭಾರೀ ನಿಯಮ ಉಲ್ಲಂಘನೆಯಾದ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿ ಮತ್ತು ಆರೋಗ್ಯ ಇನ್ಸ್ ಪೆಕ್ಟರ್ ಅವರು ಸೂಕ್ತವಾಗಿ ಮೇಲ್ವಿಚಾರಣೆ ನೋಡಿಕೊಳ್ಳದ ಕಾರಣ ಸೇವೆಯಿಂದ ಅಮಾನತು ಮಾಡಲಾಗಿದೆ ಎಂದರು.
ಈ ಅಭಿಯಾನವನ್ನು ಕಳೆದ ತಿಂಗಳು 29 ರಂದು ಆರಂಭಿಸಲಾಗಿದ್ದು, ಯಾವೆಲ್ಲಾ ಮಳಿಗೆಗಳಲ್ಲಿ ಬೆಂಕಿ ಹೊರಹೋಗಲು ಸರಿಯಾದ ವ್ಯವಸ್ಥೆಯಿಲ್ಲವೋ, ಬಿದಿರು ಮ್ಯಾಟ್ಸ್, ಸುತ್ತುವ ಲೋಹದ ಭಾಗಗಳು ಮತ್ತು ಕಿರಿದಾದ ಮೆಟ್ಟಿಲುಗಳು ಹೊಂದಿದ್ದರೆ ಅಂಥವುಗಳನ್ನು ಮುಚ್ಚಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆದೇಶಿಸುತ್ತಿದೆ.