ಮಂಗಳೂರು: ಬಜರಂಗದಳದ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಶಾಸಕರು ನೀಡಲು ಬಂದ ರೂ.5 ಲಕ್ಷ ಪರಿಹಾರವನ್ನು ದೀಪಕ್ ಕುಟುಂಬಸ್ಥರು ಶುಕ್ರವಾರ ನಿರಾಕರಿಸಿದ್ದಾರೆ.
ಕಾಟಿಪಾಳ್ಳದಲ್ಲಿರುವ ಮೃತ ದೀಪಕ್ ಮನೆಗೆ ಭೇಟಿ ನೀಡಿದ ಶಾಸಕ ಮೊಯ್ದಿನ್ ಬಾವಾ ಅವರ ಎದುರು ಮಗನನ್ನು ನೆನೆದು ದೀಪಕ್ ಅವರ ತಾಯಿ ಕಣ್ಣೀರಿಟ್ಟರು. ಅಲ್ಲದೆ, ಹಂತಕರಿಗೆ ಶಿಕ್ಷೆಯಾಗಬೇಕೆಂದು ಕುಟುಂಬಸ್ಥರು ಶಾಸಕರ ಬಳಿ ಆಗ್ರಹಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಾವಾ ಅವರು, ವೈಯಕ್ತಿಕವಾಗಿ ದೀಪಕ್ ಕುಟುಂಬಕ್ಕೆ ರೂ.5 ಲಕ್ಷ ಪರಿಹಾರ ನೀಡುತ್ತಿದ್ದೇನೆಂದು ಹೇಳಿದರು. ಆದರೆ, ಪರಿಹಾರ ಧನವನ್ನು ಸ್ವೀಕರಿಸಲು ದೀಪಕ್ ತಾಯಿ ನಿರಾಕರಿಸಿದರು.
ದೀಪಕ್ ಅಮಾಯಕ ಎಂದು ತಾಯಿ ಅಳುತ್ತಿದ್ದುದ್ದನ್ನು ಕಂಡ ಶಾಸಕ ಬಾವಾ ಕೂಡ ಭಾವುಕರಾದರು. ಶಾಸಕರ ಭೇಟಿಗೆ ಸಮಾಧಾನಗೊಳ್ಳದ ಕುಟುಂಬಸ್ಥರು ನಮಗೆ ನ್ಯಾಯಬೇಕೆಂದು ಶಾಸಕರನ್ನು ತರಾಟೆಗೆ ತೆಗೆದುಕೊಂಡರು. ದೀಪಕ್ ನನ್ನು ಮತ್ತೆ ಜೀವಂತವಾಗಿ ಹಿಂದಿರುಗಿ ಬರುವಂತೆ ಮಾಡಲು ಸಾಧ್ಯವೆ? ನಿನ್ನೆ ನೀವೆಲ್ಲಿದ್ದಿರಿ? ಎಂದು ಪ್ರಶ್ನಿಸಿದರು.