ಬೆಂಗಳೂರು: ಬೆಂಗಳೂರಿನ ಹೆಚ್.ಎಸ್.ಆರ್ ಲೇಔಟ್ ಸಮೀಪದ ಇಂದಿರಾ ಕ್ಯಾಂಟೀನ್ ನಲ್ಲಿ ಕ್ಯಾಷಿಯರ್ ಆಗಿದ್ದ 35 ರ ಹರೆಯದ ಮಹಿಳೆಯೊಬ್ಬರು ತನ್ನ ಹಿರಿಯ ಸಹೋದ್ಯೋಗಿಯ ವಿರುದ್ಧ ಲೈಂಗಿಕ ಲಿರುಕುಳ ಪ್ರಕರಣ ದಾಖಲಿಸಿದ್ದಾರೆ. ಹೆಣ್ಣೂರು ಬಂಡೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮಾಜಿ ಸೈನಿಕ ಸತೀಶ್ ಎನ್ನುವವರು ತನ್ನೊಂದಿಗೆ ಸಹಕರಿಸುವಂತೆ ಒತ್ತಾಯಿಸುತ್ತಿದ್ದಾರೆ. ಅವರು ಕ್ಯಾಂಟೀನ್ ನ ಇತರೆ ಕೆಲಸಗಾರರ ನಡುವೆ ಈ ಕುರಿತಂತೆ ವದಂತಿಗಳನ್ನು ಹರಡುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಸಂತ್ರಸ್ತ ಮಹಿಳೆಯು ಬೆಂಗಳೂರಿನ ಅಂಬೇಡ್ಕರ್ ನಗರದ ನಿವಾಸಿಯಾಗಿದ್ದು ಅವರು ಪತಿ ಹಾಗೂ ಓರ್ವ ಮಗನನ್ನು ಹೊಂದಿದ್ದಾರೆ. ಸತೀಶ್ ಸೂಪರ್ ವೈಸರ್ ಆಗಿದ್ದ ಕ್ಯಾಂಟೀನ್ ಗೆ ಈ ಮಹಿಳೆ ಕಳೆದ ಮೂರು ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದರು ಎಂದು ಪೋಲೀಸರು ಮಾಹಿತಿ, ನೀಡಿದ್ದಾರೆ.
ಬೊಮ್ಮನಹಳ್ಳಿ ನಿವಾಸಿ ಸತೀಶ್ (34) ಈ ಮೊದಲು ಸಶಸ್ತ್ರ ಪಡೆಗಳಲ್ಲಿ ಜೂನಿಯರ್ ಕಮೀಷನರ್ ಆಫೀಸರ್ ಆಗಿದ್ದರು. ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಅವರು 15 ಕ್ಯಾಂಟೀನ್ ಗಳನ್ನು ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಸಂತ್ರಸ್ತೆ ಕೊಟ್ಟ ದೂರಿನನ್ವಯ ಸತೀಶ್ ಆಕೆಯನ್ನು ಫೋನ್ ಮಾಡಿ ಕರೆದು ಲೈಂಗಿಕ ಕ್ರಿಯೆಗಾಗಿ ಒತ್ತಾಯಿಸುತ್ತಿದ್ದ. ಅಷ್ಟೇ ಅಲ್ಲದೆ ಆಕೆ ತಮ್ಮೊಂದಿಗೆ ಕಾನೂನುಬಾಹಿರ ಸಂಬಂಧ ಹೊಂದಿದ್ದಾರೆ ಎಂದು ವದಂತಿಗಳನ್ನು ಹರಡುತ್ತಿದ್ದ . ಇದನ್ನು ಆಕೆ ಪ್ರಶ್ನಿಸಿದಾಗ ತಾನು ಆಕೆಯ ಕುಟುಂಬವನ್ನು ಕೊಂದು ಅವಳನ್ನು ಉದ್ಯೋಗವಂಚಿತಳನ್ನಾಗಿ ಮಾಡುವುದಾಗಿ ಬೆದರಿಕೆ ಹಾಕಿದ್ದನೆಂದು ಹಿರಿಯ ಪೋಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
"ಸತೀಶ್ ತನ್ನ ಪತ್ನಿಗೆ ಕರೆ ಮಾಡಿ ತಡರಾತ್ರಿಯ ವೇಳೆ ಅವನನ್ನು ಭೇಟಿಯಾಗಲು ಒತ್ತಾಯಿಸುತ್ತಿದ್ದ ಮತ್ತು ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರಿಂದ ಆಕೆಯನ್ನು ಕೆಲಸದಿಂದ ವಜಾ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.ನನ್ನ ಹೆಂಡತಿ ನನ್ನೊಂದಿಗೆ ಈ ಕುರಿತು ಚರ್ಚಿಸಿದ್ದಾಳೆ.ನಾನು ಈ ಕುರಿತು ಪೋಲೀಸರಿಗೆ ದೂರಿತ್ತಿದ್ದೇವೆ, ನಾನು ಬಿಬಿಎಂಪಿ ಕಾರ್ಪೊರೇಟರ್ ಶೋಭಾ ಜಗದೀಶ್ ಗೌಡರನ್ನು ಸಹ ಸಂಪರ್ಕಿಸಿದ್ದೇನೆ, ಅವರು ಸತೀಶ್ ರನ್ನು ಭೇಟಿ ಮಾಡಿ ಸಭ್ಯವಾಗಿ ವರ್ತಿಸುವಂತೆ ಎಚ್ಚರಿಕೆ ನೀಡಿದ್ದರು. ಆದರೆ ಸತೀಶ್ ಮಾತ್ರ ತನ್ನ ವರ್ತನೆಯನ್ನು ಮುಂದುವರಿಸಿದ್ದರು. " ಸಂತ್ರಸ್ತೆಯ ಪತಿ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ಇದೇ ವೇಳೆ, ಸತೀಶ್ ಸಹ ಮಹಿಳೆ ಮೇಲೆ ಆರೋಪ ಮಾಡುತ್ತಿದ್ದು ಆಕೆ ಸುಳ್ಳು ಲೆಕ್ಕಗಳನ್ನು ನೀಡುವ ಮೂಲಕ ವಂಚಿಸುತ್ತಿದ್ದಾರೆ ಎಂದು ಅವರು ದೂರಿದ್ದಾರೆ. "ಕ್ಯಾಂತೀನ್ ನೌಕರರ ಪೈಕಿ ಮೂವರು ಈ ಬಗ್ಗೆ ದೂರು ನೀಡಿದ್ದು ಮತ್ತು ನಾನು ಏಜೆನ್ಸಿಗೆ ದೂರು ನೀಡಿದ್ದೇನೆ, ನಂತರ ಜನವರಿ 1 ರಂದು ಏಜೆನ್ಸಿಯಿಂದ ಆಕೆಯನ್ನು ವಜಾ ಮಾಡಲಾಯಿತು. ಆದರೆ ಆಕೆ ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ನನ್ನ ವಿರುದ್ಧ ಸುಳ್ಳು ಕೇಸು ದಾಖಲಿಸಿದ್ದಾರೆ. ಈ ಬಗ್ಗೆ ಬಿಬಿಎಂಪಿ ಕಮಿಷನರ್ಗೆ ನಾನು ಒಂದು ವರದಿಯನ್ನು ನೀಡಿದ್ದೇನೆ ಆ ಮಹಿಳೆ ಕ್ಯಾಂಟೀನಿನ ನಗದು ಪುಸ್ತಕವನ್ನು ತನ್ನ ಮನೆಗೆ ತೆಗೆದುಕೊಂಡು ಹೋಗಿದ್ದಾರೆ" ಸತೀಶ್ ಹೇಳಿದರು.