ಅವಳಿ ನಗರದ ಪೊಲೀಸರೀಗ ಹೈಟೆಕ್; ಶಾಂತಿ ಕದಡುವವರ ಮೇಲೆ ಕಣ್ಣಿಡಲಿದೆ ಕಮಾಂಡ್ ವಾಹನ
ಹುಬ್ಬಳ್ಳಿ: ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆಯನ್ನು ಹೊಂದಿರುವ ಕಮಾಂಡ್ ವಾಹನಗಳು ಅವಳಿ ನಗರ ಹುಬ್ಭಳ್ಳಿ-ಧಾರವಾಡ ಮಹಾನಗರದ ರಸ್ತೆಗಿಳಿಯಲು ಸಜ್ಜಾಗಿದ್ದು, ಈ ಮೂಲಕ ಕಮಾಂಡ್ ವಾಹನಗಳನ್ನು ಹೊಂದಿದ ಮಹಾನಗರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಬೆಂಗಳೂರು ನಗರದಲ್ಲಿರುವ ಗಸ್ತು ವಾಹನಗಳಿಗೆ ಹೋಲಿಸಿದರೆ, ಹುಬ್ಬಳ್ಳಿ ಹಾಗೂ ಧಾರವಾಡದ ಕಮಾಂಡ್ ವಾಹನಗಳು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ವಾಹನಗಳಾಗಿವೆ. ಕಮಾಂಡ್ ವಾಹಗಳು ನಗರದ ರಸ್ತೆಗಳ ಮೇಲೆ ನಿರಂತರವಾಗಿ ಕಣ್ಗಾವಲಿರಿಸಲಿದ್ದು, ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಂದರ್ಭಗಳಲ್ಲಿ ಕಮಾಂಡ್ ವಾಹನಗಳು ಪ್ರಮುಖ ಪಾತ್ರ ವಹಿಸುತ್ತವೆ.
ಕಮಾಂಡ್ ವಾಹನಗಳಲ್ಲಿ ಒಟ್ಟು 19 ಕ್ಯಾಮೆರಾಗಳಿದ್ದು, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯುಂಟಾದಾಗ 19 ಪೊಲೀಸ್ ಸಿಬ್ಬಂದಿಗಳು ಮಾಡುವಂತಹ ಕೆಲಸದ ಸಾಮರ್ಥ್ಯ ಈ ವಾಹನ ಹೊಂದಿರುತ್ತದೆ ಎಂದು ಉಪ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ರೇಣುಕಾ ಸುಕುಮಾರ್ ಅವರು ಹೇಳಿದ್ದಾರೆ.
ಕಮಾಂಡ್ ವಾಹನ ಮೊಬೈಲ್ ಪೊಲೀಸ್ ಠಾಣೆಯಂತಿದ್ದು, ಇದರಲ್ಲಿ ವಿಡಿಯೋ ವಾಲ್, ಪಾಲ್-ಟಿಲ್ಟ್-ಝೂಮ್ ಕ್ಯಾಮೆರಾಗಳು ಸೇರಿದಂತೆ ಎಲ್ಲಾ ರೀತಿಯ ಸಂವಹನ ವ್ಯವಸ್ಥೆಯನ್ನು ಅಳವಡಿಸಲಾಗಿದೆ.
ಮೆರವಣಿಗೆ, ಅಹಿತಕರ ಘಟನೆ, ಚುನಾವಣಾ ರ್ಯಾಲಿ ಸಂದರ್ಭಗಳಲ್ಲಿ ಸಮಾಜ ವಿರೋಧಿ ಚಟುವಟಿಕೆ ನಡೆಸುತ್ತಿರುವ ಗುಂಪಿನಲ್ಲಿರುವವರನ್ನು ಗುಪ್ತ ಕ್ಯಾಮೆರಾಗಳನ್ನು ಧರಿಸಿರುವ ಸಿಬ್ಬಂದಿ ಮೂಲಕ ಫೋಟೋಗಳನ್ನು ಸೆರೆ ಹಿಡಿಯಲಾಗುತ್ತದೆ. ಕಮಾಂಡ್ ವಾಹನದಲ್ಲಿ ಸೆರೆ ಹಿಡಿಯಲಾದ ಫೋಟೋಗಳು ಹಾಗೂ ಸಂದೇಶಗಳು ನೇರವಾಗಿ ಸಂಚಾರ ನಿರ್ವಹಣಾ ಕೇಂದ್ರಕ್ಕೆ ತಲುಪುತ್ತವೆ. ಅಲ್ಲಿಂದಲೇ ಮೇಲಾಧಿಕಾರಿಗಳು ಪರಿಸ್ಥಿತಿಯನ್ನು ನಿಭಾಯಿಸಬಹುದಾಗಿದೆ ಎಂದು ಹೇಳಿದ್ದಾರೆ.
ಇಂಟರ್ನೆಟ್ ಸಂಪರ್ಕ ಕೂಡ ಇದ್ದು, ಇದರಿಂದ ಸಂಚಾರ ನಿರ್ವಹಣಾ ಕೊಠಡಿಯನ್ನು ಸಂಪರ್ಕಿಸಬಹುದಾಗಿದೆ. ವಾಹನದಲ್ಲಿ ಯುಪಿಎಸ್ ವ್ಯವಸ್ಥೆಯಿದ್ದು, ಇದರಿಂದ ಗುಗ್ರಾಮಗಳಲ್ಲೂ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.
ವಾಹನದಲ್ಲಿರುವ ವೈಯರ್ ಲೆಸ್ ವ್ಯವಸ್ಥೆ ಮತ್ತು ಕಂಪ್ಯೂಟ್ ವಿಭಾಗಕ್ಕಾಗಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಸಿಬ್ಬಂದಿಗಳಿಗೆ ತರಬೇತಿಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos