ಬೆಂಗಳೂರಿನ ಕಲಾಸಿಪಾಳ್ಯದ ಕೈಲಾಶ್ ಬಾರ್ ನಲ್ಲಿ ನಡೆದ ಅಗ್ನಿ ದುರಂತದಲ್ಲಿ ಸುಟ್ಟು ಕರಕಲಾದ ಮಳಿಗೆ
ಬೆಂಗಳೂರು: ನಗರದ ಕಲಾಸಿಪಾಳ್ಯದಲ್ಲಿರುವ ಕೈಲಾಶ್ ಬಾರ್ ನಲ್ಲಿ ಕಳೆದ ಮಧ್ಯರಾತ್ರಿ 2.30ರ ಸುಮಾರಿಗೆ ನಡೆದ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಬಾರ್ ಮಾಲಿಕ ದಯಾಶಂಕರ್ ಮತ್ತು ಅನುಮತಿ ಪಡೆದವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಬಾರ್ ಮಾಲಿಕ ಆರ್.ವಿ.ದಯಾಶಂಕರ್ ತಲೆಮರೆಸಿಕೊಂಡಿದ್ದಾರೆ.
ಘಟನೆಗೆ ಸಂಬಂಧಪಟ್ಟ ಸಮಗ್ರ ಮಾಹಿತಿ ಪಡೆದುಕೊಳ್ಳಲು ಮತ್ತು ಕೂಲಂಕಷ ಪರಿಶೀಲನೆ ನಡೆಸಲು ಸ್ವಲ್ಪ ಹೊತ್ತಿಗೆ ಮುನ್ನ ಗೃಹ ಸಚಿವ ರಾಮಲಿಂಗಾ ರೆಡ್ಡಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಗೃಹ ಸಚಿವ ರಾಮಲಿಂಗಾ ರೆಡ್ಡಿ, ನಗರದಾದ್ಯಂತ ಇರುವ ಬಾರ್ ಅಂಡ್ ರೆಸ್ಟೊರೆಂಟ್ ಗಳು, ಹೊಟೇಲ್ ಗಳಲ್ಲಿ ಬೆಂಕಿ ಆರಿಸುವ ವ್ಯವಸ್ಥೆಯನ್ನು ಕಡ್ಡಾಯವಾಗಿ ಅಳವಡಿಸಬೇಕಾಗಿದ್ದು, ಪ್ರತಿವರ್ಷ ಅದನ್ನು ನವೀಕರಿಸುವ ಕೆಲಸವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಅಬಕಾರಿ ಇಲಾಖೆ ಮತ್ತು ಅಗ್ನಿಶಾಮಕ ಇಲಾಖೆಗಳು ಮಾಡಬೇಕು. ಈ ಪರಿಶೀಲನೆ ಮತ್ತು ತನಿಖೆ ಸರಿಯಾಗಿ ನಡೆಸಲಾಗುತ್ತದೆಯೇ ಎಂದು ತನಿಖೆ ನಡೆಸಲಾಗುವುದು ಎಂದು ಹೇಳಿದರು.
ಅಗ್ನಿ ಅವಘಡಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಮೋಲ್ನೋಟಕ್ಕೆ ಕಂಡುಬರುತ್ತಿದ್ದರೂ ಕೂಡ ಕಾರಣವೇನೆಂದು ಇನ್ನೂ ಪೊಲೀಸರು ಮತ್ತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಕೈಲಾಶ್ ಬಾರ್ ನ ಪ್ರವೇಶ ದ್ವಾರದಲ್ಲಿಯೇ ಅಗ್ನಿ ಅವಘಡವಾದಾಗ ಒಂದೇ ಬಾಗಿಲು ಇರುವುದರಿಂದ ಒಳಗಿದ್ದ ಕಾರ್ಮಿಕರು ಹೊರಬರಲಾಗದೆ ಮೂವರು ಬೆಂಕಿಗೆ ಸುಟ್ಟು ಮೃತರಾದರೆ ಮತ್ತಿಬ್ಬರು ಉಸಿರುಟ್ಟಿ ಮೃತಪಟ್ಟಿದ್ದಾರೆ ಎಂದು ರಾಮಲಿಂಗಾ ರೆಡ್ಡಿ ಹೇಳಿದರು.
ನಗರದ ಬಹುತೇಕ ಬಾರ್ ಅಂಡ್ ರೆಸ್ಟೊರೆಂಟ್ ಗಳಿಗೆ ರಾತ್ರಿ 11.30ಯವರೆಗೆ ತೆರೆದಿರಲು ಅವಕಾಶವಿದ್ದು, ಕೆ.ಆರ್.ಮಾರುಕಟ್ಟೆ, ಶಿವಾಜಿನಗರ, ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಯಂತಹ ಕೆಲವು ಪ್ರದೇಶಗಳಲ್ಲಿ ರಾತ್ರಿ ಒಂದು ಗಂಟೆಯವರೆಗೆ ಮದ್ಯ ಪೂರೈಸಲು ಸರ್ಕಾರವೇ ಅನುಮತಿ ನೀಡಿದೆ. ಆಗರೆ ವಾಣಿಜ್ಯ ಸಂಕೀರ್ಣಗಳಲ್ಲಿ ಮತ್ತು ವಾಣಿಜ್ಯ ಪ್ರದೇಶಗಳಲ್ಲಿರುವ ಬಾರ್ ಅಂಡ್ ರೆಸ್ಟೊರೆಂಟ್, ಹೊಟೇಲ್ ಗಳಲ್ಲಿ ಕಡ್ಡಾಯವಾಗಿ ಬೆಂಕಿ ನಂದಿಸುವ ವ್ಯವಸ್ಥೆಯನ್ನು ಅಳವಡಿಸಿಕೊಂಡಿರಬೇಕೆಂದು ನಿಯಮವಿದೆ. ಅದು ಸರಿಯಾಗಿ ಜಾರಿಯಾಗುತ್ತಿದೆಯೇ ಇಲ್ಲವೇ ಎಂದು ಅಧಿಕಾರಿಗಳಿಗೆ ತನಿಖೆ ನಡೆಸಲು ಸೂಚಿಸಿ ವರದಿ ನೀಡಲು ಆದೇಶಿಸಿರುವುದಾಗಿ ಗೃಹಸಚಿವರು ತಿಳಿಸಿದರು.
ಮೃತ ಕಾರ್ಮಿಕರಿಗೆ ಪರಿಹಾರವನ್ನು ಸರ್ಕಾರದಿಂದ ನೀಡಲು ಸಾಧ್ಯವಾಗುವುದಿಲ್ಲ. ಇದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಡಳಿತ ವ್ಯಾಪ್ತಿಗೆ ಬರುವುದರಿಂದ ಮೃತಪಟ್ಟವರ ಕುಟುಂಬದವರಿಗೆ ಸೂಕ್ತ ಪರಿಹಾರ ನೀಡುವಂತೆ ಮೇಯರ್ ಸಂಪತ್ ಕುಮಾರ್ ಅವರಿಗೆ ಸೂಚಿಸಿರುವುದಾಗಿ ಹೇಳಿದರು.
ಸಚಿವ ಕೆ.ಜೆ.ಜಾರ್ಜ್ ಭೇಟಿ: ಅಗ್ನಿ ದುರಂತ ಸ್ಥಳಕ್ಕೆ ಭೇಟಿ ನೀಡಿದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಕೆ.ಆರ್.ಮಾರ್ಕೆಟ್ ವ್ಯಾಪ್ತಿಯಲ್ಲಿ ಬರುವ ಈ ಬಾರ್ ಅಂಗಡಿ ಕಟ್ಟಡ ಅತ್ಯಂತ ಹಳೆಯದಾಗಿದ್ದು, ಇಲ್ಲಿ ಭದ್ರತಾ ಕ್ರಮ ಕೈಗೊಳ್ಳಲಾಗಿತ್ತೇ, ಇಲ್ಲವೇ ಎಂದು ತನಿಖೆ ನಡೆಸಲಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕೆ.ಆರ್.ಮಾರುಕಟ್ಟೆ ಪ್ರದೇಶದಲ್ಲಿ ಈ ಬಾರ್ ಇರುವುದರಿಂದ ಮಾರುಕಟ್ಟೆಗೆ ಬೇರೆ ದೂರದ ಕಡೆಗಳಿಂದ ರೈತರು, ಜನರು ವಿವಿಧ ಕಾರ್ಯಗಳಿಗಾಗಿ ಬರುವುದರಿಂದ ಈ ಸುತ್ತಮುತ್ತಲ ಪ್ರದೇಶಗಳಲ್ಲಿ ಹೊಟೇಲ್ ಗಳಿಗೆ ಮಧ್ಯರಾತ್ರಿ 1.30ವರೆಗೆ ತೆರೆದಿರಲು ಸರ್ಕಾರ ಅವಕಾಶ ನೀಡಿದೆ ಎಂದು ಶಾಸಕ ಆರ್.ವಿ.ದೇವರಾಜ್ ಹೇಳಿದ್ದಾರೆ. ಅವರು ಕೂಡ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.