ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಅಧ್ಯಕ್ಷ ವೀರಪ್ಪ ಮೊಯ್ಲಿ
ಕಲಬುರಗಿ: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಲಿಂಗಾಯತ, ವೀರಶೈವ ಪ್ರತ್ಯೇಕ ಧರ್ಮ ವಿಚಾರ ಸೇರ್ಪಡೆಗೊಳಿಸುವುದಿಲ್ಲ ಎಂದು ಸಂಸದ, ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಅಧ್ಯಕ್ಷ ವೀರಪ್ಪ ಮೊಯ್ಲಿ ಅವರು ಭಾನವಾರ ಹೇಳಿದ್ದಾರೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, 2025ರೊಳಗಾಗಿ ನವ ಕರ್ನಾಟಕ ನಿರ್ಮಾಣದ ಕಲ್ಪನೆಯೊಂದಿಗೆ ನಮ್ಮ ಪ್ರಣಾಳಿಕೆಯನ್ನು ಸಿದ್ಧಪಡಿಸುತ್ತಿದ್ದೇವೆ. ಈ ಮಾಸಾಂತ್ಯದೊಳಗೆ ಪ್ರಣಾಳಿಕೆ ಸಂಬಂಧಿಸಿದ ವರದಿಯನ್ನು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರಿಗೆ ಸಲ್ಲಿಸಲಾಗುವುದು. ಪ್ರಣಾಳಿಕೆಯಲ್ಲಿ ರೈತರಿಗೆ, ಪ್ರಾದೇಶಿಕ ಅಸಮಾನತೆ ಹೋಗಲಾಡಿಸುವುದು. ಎಲ್ಲಾ ವರ್ಗ, ಸಮುದಾಯಗಳಿಗೆ ಆದ್ಯತೆ ನೀಡುವಂತಹ ಹಲವಾರು ಸಂಗತಿಗಳು ಇರಲಿವೆ. ಸತ್ಯ ಹಾಗೂ ರಾಜಧರ್ಮ ಆಧಾರದ ಮೇಲೆಯೇ ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಜಾತ್ಯಾತೀತ ಪಕ್ಷವಾಗಿದ್ದು, ಪ್ರತ್ಯೇಕ ಸಮುದಾಯಕ್ಕೆ ಭರವಸೆಯನ್ನು ನೀಡುವಿದಿಲ್ಲ. ಲಿಂಗಾಯತ ಧರ್ಮ ವಿಚಾರದಲ್ಲಿ ಪಕ್ಷ ಮೂಗು ತೂರಿಸುವುದಿಲ್ಲ. ಈ ವಿಚಾರಕ್ಕೆ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಅವಕಾಶವನ್ನೂ ನೀಡಿಲ್ಲ. ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಏನಿದ್ದರೂ ಆಯಾ ಸಮುದಾಯಗಳವರ ಹೋರಾಟವಷ್ಟೇ. ಸಚಿವರು ಈ ವಿಚಾರದಲ್ಲಿ ಹೇಳಿಕೆಗಳನ್ನು ನೀಡಿದರೆ, ಅದು ಅವರ ವೈಯಕ್ತಿಕ ಹೇಳಿಕೆಯೇ ಹೊರತು ಪಕ್ಷದ ಅಭಿಪ್ರಾಯವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕಾ ಸಮಿತಿ ತನ್ನ ಅನುಕೂಲಕ್ಕಾಗಿ ರಾಜ್ಯವನ್ನು 6 ವಿಭಾಗವಾಗಿಸಿದೆ. 6 ವಿಭಾಗದಲ್ಲಿ ಮಂಗಳೂರು, ಮೈಸೂರು, ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ ಮತ್ತು ಚಿತ್ರದುರ್ಗ ಇದೆ. ಪ್ರಣಾಳಿಕಾ ಸಮಿತಿ ಈ 6 ನಗರಗಳಿಗೆ ಭೇಟಿ ನೀಡಿ, ಡಿಸಿಸಿ ಅಧ್ಯಕ್ಷರು, ಜಿಲ್ಲಾ ಸಚಿವರು ಹಾಗೂ ಸಾರ್ವಜನಿಕ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಮಾತುಕತೆ ನಡೆಸುತ್ತಾರೆ. ಬಳಿಕ ಪಕ್ಷದ ವರಿಷ್ಟರೊಂದಿಗೆ ಮಾತುಕತೆ ನಡೆಸುತ್ತದೆ. ಜನವರಿ 25ರೊಳಗಾಗಿ ಅಂತಿಮವಾಗಿ ಪಕ್ಷದ ಪ್ರಣಾಳಿಕೆ ಸಿದ್ಧಗೊಳ್ಳುತ್ತದೆ.
ಪ್ರಣಾಳಿಕೆಯೆಂಬುದು ಕಾಂಗ್ರೆಸ್'ಗೆ ಭಗವದ್ಗೀತೆ, ಕುರಾನ್, ಬೈಬಲ್ ಇದ್ದಂತೆ. ಇದೊಂದು ಪಕ್ಷದ ಬದ್ಧತೆಯಾಗಿದ್ದು, ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಈಡೇರಿಸಬೇಕಿದೆ. 2013ರಲ್ಲಿ ನಡೆದ ಚುನಾವಣೆ ವೇಳೆ ಕಾಂಗ್ರೆಸ್ 170 ಭರವಸೆಗಳನ್ನು ನೀಡಿತ್ತು. ಇದರಲ್ಲಿ 2 ಭರವಸೆಗಳನ್ನು ಬಿಟ್ಟು ಉಳಿದ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೇವೆ. ಉಳಿದಿರುವ 2 ಭರವಸೆಗಳನ್ನೂ ಕೂಡ ಇನ್ನು 3 ತಿಂಗಳಲ್ಲಿ ಈಡೇರಿಸುತ್ತೇವೆಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics