ರಾಜ್ಯ

ಅಕ್ರಮ ಆಸ್ತಿಗಳಿಕೆ: ಎಫ್ಐಆರ್'ಗಳನ್ನು 24 ಗಂಟೆಗಳೊಳಗೆ ವೆಬ್'ಸೈಟ್"ಗೆ ಅಪ್'ಲೋಡ್ ಮಾಡಿ: ಅಧಿಕಾರಿಗಳಿಗೆ ಎಸಿಬಿ

Manjula VN
ಬೆಂಗಳೂರು: ಲಂಚ ಸ್ವೀಕಾರ ವೇಳೆ ಹಿಡಿಯುವ ಮತ್ತು ಅಕ್ರಮ ಆಸ್ತಿಗಳಿಕೆಯಲ್ಲಿ ದಾಳಿ ಪ್ರಕರಣಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಎಫ್ಐಆರ್'ಗಳನ್ನು 24 ಗಂಟೆಗಳೊಳಗಾಗಿ ವೆಬ್''ಸೈಟ್'ನಲ್ಲಿ ಅಪ್'ಲೋಡ್ ಮಾಡಿ ಎಂದು ಅಧಿಕಾರಿಗಳಿಗೆ ಭ್ರಷ್ಟಾಚಾರ ನಿಗ್ರಹ ದಳ ಸೂಚನೆ ನೀಡಿದೆ. 
ಭ್ರಷ್ಟಾಚಾರ ನಿಗ್ರಹ ದಳ ಮತ್ತು ಬೆಂಗಳೂರು ಮಹಾನಗರ ಕಾರ್ಯಪಡೆ ದಾಖಲಿಸಿರುವ ಎಫ್ಐಆರ್ ಗಳ ಪ್ರತಿಯನ್ನು ಅಧಿಕೃತ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡದಿರುವ ವಿಚಾರಕ್ಕೆ ಸಂಬಂಧಿಸಿದಂತೆ ವಕೀಲ ಎಸ್.ಉಮಾಪತಿ ಎಂಬುವವರು ಈ ಹಿಂದೆ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. 
ಇದರಂತೆ ಅರ್ಜಿಯನ್ನು ನಿನ್ನೆ ವಿಚಾರಣೆ ನಡೆಸಿರುವ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಹೆಚ್.ಜಿ.ರಮೇಶ್ ಮತ್ತು ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠಕ್ಕೆ ಎಸಿಬಿ ಪರ ವಕೀಲ ವೆಂಕಟೇಶ ದಳವಾಯಿಯವರು ಪ್ರಮಾಣ ಪತ್ರ ಸಲ್ಲಿಸಿದ್ದು, ಲಂಚ ಸ್ವೀಕಾರ ವೇಳೆ ಹಿಡಿಯುವ ಮತ್ತು ಅಕ್ರಮ ಆಸ್ತಿ ಗಳಿಕೆಯಲ್ಲಿ ದಾಳಿ ಪ್ರಕರಣಗಳನ್ನು ಹೊರತು ಪಡಿಸಿ ಇನ್ನೆಲ್ಲಾ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಎಫ್ಐಆರ್ ಗಳನ್ನು 24 ಗಂಟೆಗಳಲ್ಲಿ ವೆಬ್'ಸೈಟ್ ನಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ. 
ಲಂಚ ಸ್ವೀಕಾರ ಸಂದರ್ಭದಲ್ಲಿ ಆರೋಪಿಗಳನ್ನು ಎಸಿಬಿ ಹಿಡಿಯುತ್ತದೆ. ಹಾಗೆಯೇ, ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಆರೋಪಿಗಳ ಮನೆ ಹಾಗೂ ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸುತ್ತಾದೆ. ಈ ಎರಡು ಬಗೆಯ ಪ್ರಕರಣಗಳ ಮೇಲೆ ಕ್ರಮ ಕೈಗೊಳ್ಳುವುದಕ್ಕೂ ಮುನ್ನ ಎಫ್ಐಆರ್ ದಾಖಲಿಸಲಾಗುತ್ತದೆ. ಆದರೆ, ಆ ಎಫ್ಐಆರ್ ಗಳನ್ನು 24 ಗಂಟೆಗಳಲ್ಲಿ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗದು, 
ಎಫ್ಐಆರ್ ಗಳನ್ನು ಪ್ರಕಟಿಸಿದ್ದೇ ಆದಲ್ಲಿ ಅದರಲ್ಲಿನ ಅಂಶಗಳು ಬಯಲಾಗಿ ಆರೋಪಿಗಳು ತಪ್ಪಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಹೀಗಾಗಿ ಅದನ್ನು ಹೊರತುಪಡಿಸಿ ಉಳಿದ ಎಲ್ಲಾ ಪ್ರಕರಣಗಳ ಸಂಬಂಧ ದಾಖಲಿಸುವ ಎಫ್ಐಆರ್ ಗಳನ್ನು 24 ಗಂಟೆಗಳಲ್ಲಿ ವೆಬ್'ಸೈಟ್ ನಲ್ಲಿ ಪ್ರಕಟಿಸಲಾಗುವುದು. ಈ ಸಂಬಂಧ ಎಸಿಬಿಯ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ಸೂಚನೆ ನೀಡಿ ಸುತ್ತೋಲೆಯನ್ನು ಹೊರಡಿಸಲಾಗುತ್ತದೆ ಎಂದು ದಳವಾಯಿಯವರು ನ್ಯಾಯಾಲಯಕ್ಕೆ ವಿವರಣೆ ನೀಡಿದರು. 
SCROLL FOR NEXT