ಹಾವೇರಿ/ಬಳ್ಳಾರಿ: ನಿನ್ನೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಖಾಸಗಿ ಸುದ್ದಿ ವಾಹಿನಿಯ ಶಿರಸಿಯ ವರದಿಗಾರ ಮೌನೇಶ ಪೋತರಾಜ ಅವರ ಮೃತ ದೇಹವನ್ನು ಹಾನಗಲ್ ನ ಸರ್ಕಾರಿ ಆಸ್ಪತ್ರೆಗೆ ಕಸ ಸಾಗಿಸುವ ವ್ಯಾನ್ ನಲ್ಲಿ ಸಾಗಿಸಿರುವುದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಇದೊಂದು ಅಮಾನವೀಯ ಮತ್ತು ಕ್ರೂರ ಕೃತ್ಯ ಎಂದು ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಖಂಡಿಸುತ್ತಿದ್ದಾರೆ.
ಸರ್ಕಾರಿ ಆಸ್ಪತ್ರೆಗೆ ಮೃತದೇಹವನ್ನು ಕೊಂಡೊಯ್ದಾಗ ಹಣ ಪಾವತಿಸದಿದ್ದರೆ ದೇಹವನ್ನು ಮುಟ್ಟುವುದೇ ಇಲ್ಲ ಎಂದು ಅಲ್ಲಿನ ಸಿಬ್ಬಂದಿ ಮತ್ತಷ್ಟು ಅಮಾನವೀಯವಾಗಿ ನಡೆದುಕೊಂಡರು. ಶವವನ್ನು ಕೊಳಕು ಬಟ್ಟೆಯಲ್ಲಿ ಸುತ್ತಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ.
ಕಾರವಾರ ಜಿಲ್ಲೆಯ ಸಿರ್ಸಿಯಲ್ಲಿ ಖಾಸಗಿ ಸುದ್ದಿ ವಾಹಿನಿಯ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದ 28 ವರ್ಷದ ಮೌನೇಶ್ ಪೋತರಾಜ್, ನಿನ್ನೆ ಸಂಕ್ರಾಂತಿ ಹಬ್ಬಕ್ಕೆಂದು ತಮ್ಮ ಕುಟುಂಬದ ಸದಸ್ಯರಿಗೆ ಉಡುಗೊರೆ ಖರೀದಿಸಿ ಬೈಕ್ ನಲ್ಲಿ ತಮ್ಮ ಮನೆಯಾದ ಗದಗ್ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಕಡೆಗೆ ಸಂಚರಿಸುತ್ತಿದ್ದರು.ಹಾನಗಲ್-ಬಂಕಾಪುರ ರಸ್ತೆಯ ಗುಂಡೂರು ಗ್ರಾಮದಲ್ಲಿ ನವೋದಯ ಕೇಂದ್ರೀಯ ವಿದ್ಯಾಲಯ ಶಾಲೆಯ ಹತ್ತಿರ ರಸ್ತೆಬದಿಯ ಮರಕ್ಕೆ ಮೊನ್ನೆ ಶನಿವಾರ ರಾತ್ರಿ ಬೈಕ್ ಗುದ್ದಿ ಪೋತೇಶ್ ಮೃತಪಟ್ಟಿರಬೇಕು ಎಂದು ಶಂಕಿಸಲಾಗಿದೆ.
ಘಟನೆ ಬೆಳಕಿಗೆ ಬಂದಿದ್ದು ಮಾತ್ರ ನಿನ್ನೆ ಬೆಳಗ್ಗೆ. ವಿಷಯ ತಿಳಿದ ಹಾನಗಲ್ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಹಾನಗಲ್ ಪುರಸಭೆಗೆ ಸೇರಿದ ಕಸದ ವಾಹನದಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು.
ನಿನ್ನೆ ಇದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದಂತೆ ಆಂಬ್ಯುಲೆನ್ಸ್ ಸಿಗದ ಕಾರಣ ಕಸದ ವಾಹನದಲ್ಲಿ ಮೃತದೇಹವನ್ನು ಕೊಂಡೊಯ್ಯಬೇಕಾಗಿ ಬಂತು ಎಂದು ಪೊಲೀಸರು ಸಮರ್ಥಿಸಿಕೊಂಡಿದ್ದಾರೆ. ''ಯಾರನ್ನು ಕೂಡ ನೋಯಿಸುವ ಉದ್ದೇಶ ನಮಗಿರಲಿಲ್ಲ. ಶನಿವಾರದಿಂದ ಹಬ್ಬವಿದ್ದ ಕಾರಣ ಯಾವುದೇ ವಾಹನ ಸಿಕ್ಕಿರಲಿಲ್ಲ. ನಮಗೆ ಬೇರೆ ಅವಕಾಶಗಳಿಲ್ಲದೆ ಕಸದ ವಾಹನದಲ್ಲಿ ತೆಗೆದುಕೊಂಡು ಹೋಗಬೇಕಾಗಿ ಬಂತು ಎಂದು ಹಾವೇರಿ ಪೊಲೀಸ್ ವರಿಷ್ಠ ಕೆ. ಪರಶುರಾಮ ಹೇಳುತ್ತಾರೆ.
ಅದಕ್ಕಿಂತಲೂ ಅಮಾನವೀಯ ಕೃತ್ಯವೆಂದರೆ ಹಾನಗಲ್ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ನಡೆಸಿಕೊಂಡ ರೀತಿ ಎನ್ನುತ್ತಾರೆ ಮತ್ತೊಬ್ಬ ಪತ್ರಕರ್ತ ಬಸವರಾಜ್. ನಾವೆಲ್ಲ ಸೇರಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದ ಮೇಲೆ ಮೃತದೇಹಕ್ಕೆ ಹಾಕಲು ಹೊಸ ಬಟ್ಟೆ ತಂದುಕೊಟ್ಟ ನಂತರ ಹಣ ನೀಡಿದ ನಂತರ ಮೃತದೇಹವನ್ನು ಮುಚ್ಚಿದರು ಎನ್ನುತ್ತಾರೆ ಅವರು.
ಶವಪರೀಕ್ಷೆ ನಡೆಸಿದ ಆಸ್ಪತ್ರೆ ವೈದ್ಯ ಡಾ.ಹರೀಶ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿ, ಇದು ವೈದ್ಯಕೀಯ ಮತ್ತು ಕಾನೂನಿನ ಪ್ರಕ್ರಿಯೆ. ಶವಪರೀಕ್ಷೆ ನಡೆಸಿ ಪೊಲೀಸರಿಗೆ ವರದಿ ನೀಡಿದ್ದೇನೆ ಎನ್ನುತ್ತಾರೆ.