ಬೆಂಗಳೂರು: ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿ ಜಾರಿ ಕುರಿತು ಕಾನೂನು ವರದಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳುವ ಭರವಸೆಯನ್ನು ಸರ್ಕಾರ ನೀಡಿದ್ದು, ಈ ಹಿನ್ನಲೆಯಲ್ಲಿ ದಲಿತ ಎಡಗೈ ಹಾಗೂ ಬಲಗೈ ಸಮುದಾಯಗಳು ನಡೆಸುತ್ತಿದ್ದ ಹೋರಾಟ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ನಿನ್ನೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದಾಶಿವ ವರದಿ ಪರ ಹಾಗೂ ವಿರುದ್ಧ ಇರುವ ಪರಿಶಿಷ್ಟ ಬಣಗಳ ನಾಯಕರೊಂದಿಗೆ ಸಮಾಲಾಚೋನೆ ನಡೆಸಿದ್ರು. ಈ ವೇಳೆ, ರಾಜ್ಯ ಸರ್ಕಾರ ಎಜೆ. ಸದಾಶಿವ ವರದಿ ಜಾರಿ ಕುರಿತು ಕಾನೂನು ಅಭಿಪ್ರಾಯದ ಮೊರೆಹೋಗಿದೆ. ಕಾನೂನು ಇಲಾಖೆ ಹಾಗೂ ಅಡ್ವೋಕೇಟ್ ಜನರಲ್ ವರದಿ ಬಂದ ಬಳಿಕ ಮತ್ತೊಮ್ಮೆ ಜನಪ್ರತಿನಿಧಿಗಳು ಹಾಗೂ ದಲಿತ ಸಂಘಟನೆಗಳ ಪ್ರತ್ಯೇಕ ಸಭೆ ನಡೆಸಲಾಗುತ್ತದೆ. ಕಾನೂನು ಇಲಾಖೆ ವರದಿ ಆಧಾರದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಅಲ್ಲಿಯವರೆಗೂ ಯಾವುದೇ ರೀತಿಯ ಹೋರಾಟ ನಡೆಸದಂತೆ ಹಾಗೂ ಹೇಳಿಕೆಗಳನ್ನು ನೀಡದಂತೆ ಮನವೊಲಿಸಿದರು.
ಸಭೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್. ಆಂಜನೇಯ ಅವರು, ಕಾನೂನು ತಜ್ಞರ ಸಲಹೆಗಳನ್ನು ಪಡೆದುಕೊಂಡ ಮತ್ತೊಂದು ಸುತ್ತಿನ ಸಭೆಯನ್ನು ನಡೆಸಲಾಗುತ್ತದೆ. ದಲಿತ ನಾಯಕರ ಅಭಿಪ್ರಾಯಗಳನ್ನು ಸಂಗ್ರಹಿಸಿದ ಬಳಿಕ ವಿಚಾರವನ್ನು ಸಂಪುಟದ ಮುಂದೆ ಇಡಲಾಗುತ್ತದೆ ಎಂದು ಹೇಳಿದ್ದಾರೆ.