ಕಸದ ಜಗಳ ಕೊಲೆಯಲ್ಲಿ ಅಂತ್ಯ, ಕಟ್ಟಡದಿಂದ ತಳ್ಳಿ ಯುವಕನ ಹತ್ಯೆ
ಬೆಂಗಳೂರು: ಕಸವನ್ನು ಎಸೆದನೆನ್ನುವ ಕಾರಣಕ್ಕೆ ಯುವಕನೊಬ್ಬನನ್ನು ಕಟ್ಟಡದ ಮೇಲಿಂದ ತಳ್ಳಿ ಹತ್ಯೆ ಮಾಡಿರುವ ಘಟನೆ ಬೆಂಗಳೂರು ಗಿರಿನಗರ ಪಿಇಎಸ್ ಕಾಲೇಜು ಬಳಿ ನಡೆದಿದೆ.
ತುಮಕೂರು ಮೂಲದ ದೇವರಾಜ್ (29)ಕೊಲೆಯಾದ ದುರ್ದೈವಿಯಾಗಿದ್ದು ಶುಕ್ರವಾರ ರಾತ್ರಿ ತಾನು ವಾಸವಿದ್ದ ಕಟ್ಟಡದಿಂದ ಕಸವನ್ನು ರಸ್ತೆಗೆ ಎಸೆದಿದ್ದ. ಇದೇ ವೇಳೆ ರಸ್ತೆಯಲ್ಲಿದ್ದ ಮೂವರು ಯುವಕರ ತಂಡ ದೇವರಾಜ್ ನನ್ನು ಕಸ ಎಸದದ್ದರ ಸಂಬಂಧ ಪ್ರಶ್ನಿಸಿದೆ.ಈ ಸಂಬಂಧ ದೇವರಾಜ್ ಹಾಗೂ ಯುವಕರ ನಡುವೆ ಜಗಳ ಪ್ರಾರಂಭವಾಗಿದೆ.ಜಗಳ ವಿಕೋಪಕ್ಕೆ ತಿರುಗಿದ್ದು ಯುವಕರ ತಂಡ ದೇವರಾಜ್ ಇದ್ದ ಕಟ್ಟಡಕ್ಕೆ ತೆರಳಿ ಆತನ ಮೇಲೆ ಹಲ್ಲೆ ನಡೆಸಿರುವುದಲ್ಲದೆ ಆತನನ್ನು ಮೇಲಿನಿಂದ ಕೆಳಗೆ ತಳ್ಳಿ ಪರಾರಿಯಾಗಿದ್ದಾರೆ..
ಕೆಳಗೆ ಬಿದ್ದ ದೇವರಾಜ್ ನ ಮುಖ ಹಾಗೂ ತಲೆಗೆ ಗಾಯಗಾಳಾಗಿದ್ದು ತೀವ್ರ ರಕ್ತಸ್ರಾವವಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮೀನಾಕ್ಷಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಅಸುನೀಗಿದ್ದಾರೆ.
ಗಿರಿನಗರ ಠಾಣೆ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.