ಬೆಂಗಳೂರು: ನಗರದಲ್ಲಿ ಭಾರೀ ಸುದ್ದಿ ಹಾಗೂ ಚರ್ಚೆಗೆ ಗ್ರಾಸವಾಗಿ ಹೈಕೋರ್ಟ್ ಹಸಿರು ನಿಶಾನೆ ಪಡೆದುಕೊಂಡಿದ್ದ ಶಿವಾನಂದ ಸರ್ಕಲ್ ಉಕ್ಕಿನ ಸೇತುವೆ ಕಾರ್ಯ ಸೋಮವಾರದಿಂದ ಆರಂಭವಾಗಿದೆ.
ಜೆ.ಸಿ.ರಸ್ತೆಯಲ್ಲಿ ವಾಹನ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಮಿನರ್ವ ವೃತ್ತದಿಂದ ಹಡ್ಸನ್ ವೃತ್ತದವರೆಗೆ ನಿರ್ಮಾಣಗೊಳ್ಳಲಿರುವ ಉಕ್ಕಿನ ಸೇತುವೆ ಕಾರ್ಯ ಆರಂಭಗೊಂಡಿದೆ. ಮುಖ್ಯಮಂತ್ರಿ ನಗರೋತ್ಥಾನ ಯೋಜನೆಯಡಿಯಲ್ಲಿ ರೂ.138.80 ಕೋಟಿ ವೆಚ್ಚದಲ್ಲಿ ಬಿಬಿಎಂಪಿ ಸೇತುವೆಯನ್ನು ನಿರ್ಮಾಣ ಮಾಡುತ್ತಿದೆ.
ಉಕ್ಕಿನ ಮೇಲ್ಸೇತುವೆ ಕಾಮಗಾರಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಸ್ಥಳೀಯ ನಿವಾಸಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು. ಶೇಷಾದ್ರಿಪುರಂ ರಸ್ತೆಯ ಕಡೆ ಸಾಗುವ ವಾಹನಗಳು ಹೆಚ್ಚು. ಆದ್ದರಿಂದ ಆ ಮಾರ್ತದಲ್ಲಿ ಸೇತುವೆ ನಿರ್ಮಾಣ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದರು. ಬಳಿಕ ಅರ್ಜಿಯನ್ನು ಪರಿಶೀಲನೆ ನಡೆಸಿದ್ದ ನ್ಯಾಯಾಲಯ ಸೇತುವೆ ಕಾಮಗಾರಿಗೆ ತಡೆ ನೀಡಲು ಸಾಧ್ಯವಿಲ್ಲ ಎಂದು ಹೇಳಿತ್ತು.
ಅಲ್ಲದೆ, ನಗರಾಭಿವೃದ್ಧಿ ಇಲಾಖೆ (ಯುಡಿಡಿ)ಗೆ ಸೂಚನೆ ನೀಡಿದ್ದ ನ್ಯಾಯಾಲಯ ಬಿಬಿಎಂಪಿ ಹಾಗೂ ಅರ್ಜಿದಾರರ ನಿಲುವುಗಳನ್ನು ಸಂಗ್ರಹಿಸುವಂತೆ ತಿಳಿಸಿತ್ತು. ಇದರಂತೆ ನಗರಾಭಿವೃದ್ಧಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಮೂರು ಬಾರಿ ವಿಚಾರಣೆ ನಡೆಸಿದ್ದು, ಸಂಚಾರಿ ಪೊಲೀಸರು ವರದಿ ನೀಡುವಂತೆ ತಿಳಿಸಿದ್ದಾರೆ.
ಸರ್ಕಾರ ಯೋಜನೆಯ ಪರವಾಗಿದ್ದು, ಯೋಜನೆ ಕುರಿತ ವರದಿಯನ್ನು ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದೆ. ಶಿವಾನಂದ ವೃತ್ತದ ಬಳಿ ಹೆಚ್ಚು ಸಂಚಾರ ದಟ್ಟಣೆ ಉಂಟಾಗಲಿದ್ದು, ಬೆಳಿಗ್ಗೆ 7 ಗಂಟೆಯಿಂದಲೇ ಸಂಚಾರ ದಟ್ಟಣೆ ಉಂಟಾಗುತ್ತದೆ. ಈ ಸಂದರ್ಭದಲ್ಲಿ 11 ಸಾವಿರಕ್ಕೂ ಹೆಚ್ಚು ಕಾರುಗಳು ಸಂಚಾರ ಮಾಡುತ್ತವೆ. ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರ ಯೋಜನೆ ರೂಪಿಸಿದ್ದು, ಯೋಜನೆಗೆ ವಿರೋಧ ವ್ಯಕ್ತಪಡಿಸಿ ಸಲ್ಲಿಕೆಯಾಗಿರುವ ಅರ್ಜಿಗಳು ಹಾಗೂ ಅರ್ಜಿಯಲ್ಲಿ ಅರ್ಜಿದಾರರು ತಮ್ಮ ವಿರೋಧಕ್ಕೆ ನೀಡಿರುವ ಕಾರಣಗಳು ತಾಂತ್ರಿಕವಾಗಿ ಅಥವಾ ಬೇರಾವುದೇ ಪ್ರಕ್ರಿಯೆಯಲ್ಲೂ ಬಲವಾಗಿಲ್ಲ. ಹೀಗಾಗಿ ಸೇತುವೆ ನಿರ್ಮಾಣ ಪ್ರಮುಖವಾಗಿದೆ.
ಸೇತುವೆ ನಿರ್ಮಾಣದಿಂದ ಮಿನರ್ವ ವೃತ್ತ. ಊರ್ವಶಿ ಟಾಕೀಸ್, ಚರ್ಚ್ ಜಂಕ್ಷನ್, ಪುರಭವನ. ಎಲ್ಐಸಿಸಿ ಕೇಂದ್ರ ಕಚೇರಿ, ಹಲಸೂರು ಗೇಟ್ ಪೊಲೀಸ್ ಠಾಣೆ ಹಾಗೂ ಹಡ್ಸನ್ ವೃತ್ತದ ಜಂಕ್ಷನ್ ಗಳಲ್ಲಿ ವಾಹನ ದಟ್ಟಣೆಯನ್ನೂ ತಪ್ಪಿಸಿದಂತಾಗುತ್ತದೆ. ಸಂಚಾರದಲ್ಲಿ ಸುಮಾರು 30 ನಿಮಿಷಗಳು ಉಳಿತಾಯವಾಗುತ್ತವೆ.
ಸೇತುವೆ ನಿರ್ಮಾಣದ ವೇಳೆ ಮರಗಳನ್ನು ಕತ್ತರಿಸುವ ಬದಲು, ರೈಲ್ವೆ ಅಂಡರ್ಪಾಸ್ ಗಳ ಕೆಳಗೆ ಸ್ಥಳಾಂತರ ಮಾಡುವ ಆಯ್ಕೆಯನ್ನು ಬಿಬಿಎಂಪಿ ಅಧಿಕಾರಿಗಳಿಗೆ ಮಹೇಂದ್ರ ಜೈನ್ ಅವರಿಗೆ ನೀಡಿದ್ದಾರೆ.