ರಾಜ್ಯ

'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಎಂದ ಮಹಾರಾಷ್ಟ್ರ ಸಚಿವ ಚಂದ್ರಕಾಂತ್ ಪಾಟೀಲ್

Manjula VN
ಬೆಳಗಾವಿ: ಕನ್ನಡ ನಾಡಿಗೆ ಆಗಮಿಸಿದ್ದ ಮಹಾರಾಷ್ಟ್ರದ ಕಂದಾಯ ಹಾಗೂ ಕೊಲ್ಲಾಪುರ ಜಿಲ್ಲಾ ಉಸ್ತುವಾರಿ ಮತ್ತು ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ್ ಅವರು 'ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು' ಎಂದು ಕನ್ನಡ ಗೀತೆಯನ್ನು ಹಾಡಿದ್ದಕ್ಕೆ ಮಹಾರಾಷ್ಟ್ರದಲ್ಲಿ ಸಚಿವನ ವಿರುದ್ಧ ತೀವ್ರ ಆಕ್ರೋಶಗಳು ವ್ಯಕ್ತವಾಗತೊಡಗಿದೆ.
ಗೋಕಾಕ್ ತಾಲೂಕಿನ ತವಗ ಗ್ರಾಮದ ದೇವಾಲಯ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ಚಂದ್ರಕಾಂತ್ ಪಾಟೀಲ್ ಅವರು, ಸಮಾರಂಭದಲ್ಲಿ ಕನ್ನಡದಲ್ಲೇ ಮಾತುಗಳನ್ನು ಆರಂಭಿಸಿದ್ದರು. ಅಲ್ಲದೆ, ನಾನು ಕನ್ನಡ ಭಾಷೆ ಹಾಗೂ ನಟ ಡಾ.ರಾಜ್ ಕುಮಾರ್ ಅವರ ದೊಡ್ಡ ಅಭಿಮಾನಿಯಾಗಿದ್ದೇನೆಂದು ಹೇಳಿದ್ದರು. ಇದರ ಜೊತೆಗೆ ರಾಜ್ ಕುಮಾರ್ ಅವರು ಅಭಿನಯಿಸಿರುವ ಆಕಸ್ಮಿಕ ಚಿತ್ರದ ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು ಎಂದು ಕನ್ನಡ ಗೀತೆಯನ್ನು ಹಾಡಿದ್ದರು. 
ಮಹಾರಾಷ್ಟ್ರ ಸಚಿವರು ಕನ್ನಡ ಗೀತೆ ಹಾಡಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಮಹಾರಾಷ್ಟ್ರದಲ್ಲಿರುವ ಹಲವು ಸಂಘಟನೆಗಳು ಸಚಿವರ ವಿರುದ್ಧ ತೀವ್ರ ಆಕ್ರೋಶಗಳನ್ನು ವ್ಯಕ್ತಪಡಿಸತೊಡಗಿವೆ. ಅಲ್ಲದೆ, ಕ್ಷಣೆಯಾಚಿಸುವಂತೆ ಆಗ್ರಹಿಸುತ್ತಿವೆ. 
ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಧನಂಜಯ್ ಮುಂಡೆ ಅವರು ಟ್ವೀಟ್ ಮಾಡಿ, ಈ ಹಿಂದೆ ಗುಜರಾತ್ ರಾಜ್ಯವನ್ನು ಕೊಂಡಾಡುತ್ತಿದ್ದ ಮಹಾರಾಷ್ಟ್ರ ಸಚಿವ ಇದೀಗ ತಮ್ಮ ಪಟ್ಟಿಗೆ ಕರ್ನಾಟಕವನ್ನು ಸೇರಿಸಿಕೊಂಡಿದ್ದಾರೆಂದು ಹೇಳಿದ್ದಾರೆ. 
ಮಹಾರಾಷ್ಟ್ರ ಸಚಿವ ಚಂದ್ರಕಾಂತ್ ಪಾಟೀಲ್ ಅವರು ಮರಾಠಿ ಜನರಿಗೆ ಚಾಕುವಿನಿಂದ ಚುಚ್ಚಿದ್ದಾರೆ. ಕೂಡಲೇ ಮಹಾರಾಷ್ಟ್ರ ಜನತೆಯ ಮುಂದೆ ಕ್ಷಮೆಯಾಚಿಸಬೇಕೆಂದು ತಿಳಿಸಿದ್ದಾರೆ. 
ಗಡಿ ವಿವಾದ ಸಂಬಂಧ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ನಡುವೆ ಹಲವು ವರ್ಷಗಳಿಂದಲೂ ಮನಸ್ತಾಪಗಳಿವೆ. ಈ ನಡುವೆ ಮಹಾರಾಷ್ಟ್ರ ಸಚಿವರೊಬ್ಬರು ಕನ್ನಡ ನಾಡಿನಲ್ಲಿ ಕನ್ನಡ ಗೀತೆಯನ್ನು ಹಾಡಿ, ತಾವು ಕನ್ನಡ ಭಾಷೆಯ ಅಭಿಮಾನಿ ಎಂದು ಹೇಳಿರುವುದು ಇದೇ ಮೊದಲು. ಮಹಾರಾಷ್ಟ್ರ ಸಚಿವರ ಈ ನಡವಳಿಕೆಯನ್ನು ಬೆಳಗಾವಿಯಲ್ಲಿರುವ ಕನ್ನಡ ಪರ ಕಾರ್ಯಕರ್ತರು ಬೆಳವಣಿಗೆ ಸ್ವಾಗತಾರ್ಹ ಬದಲಾವಣೆ ಎಂದು ಹೇಳಿದ್ದಾರೆ. 
ಮರಾಠ ಹಾಗೂ ಕನ್ನಡದ ನಡುವೆ ಭಾಷಾ ಸಾಮರಸ್ಯದ ಅಗತ್ಯವಿದೆ ಎಂದು ಬೆಳಗಾವಿಯ ಕನ್ನಡ ಪರ ಸಂಘಟನೆಯ ಕಾರ್ಯಕರ್ತ ಅಶೋಕ್ ಚಂದ್ರರ್ಗಿ ಹೇಳಿದ್ದಾರೆ. 
ಮಹಾರಾಷ್ಟ್ರ ಹಾಗೂ ಕರ್ನಾಟಕದ ಗಡಿ ಭಾಗದ ಜನರು ಹಲವು ಶತಮಾನಗಳಿಂದಲೂ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಸಂಬಂಧಗಳನ್ನು ಹೊಂದಿದ್ದಾರೆ. ಮಹಾರಾಷ್ಟ್ರ ಸಂಗ್ಲಿ, ಅಕ್ಕಲ್ಕೋಟ್ ಮತ್ತು ಝಾಟ್ ಪ್ರದೇಶಗಳಲ್ಲಿರುವ  ವಿದ್ಯಾರ್ಥಿಗಳ ಕನ್ನಡ ಪುಸ್ತಕದಲ್ಲಿ ಡಾ.ರಾಜ್ ಕುಮಾರ್ ಅವರ ಕುರಿತಾಗಿಯೇ ಒಂದು ಅಧ್ಯಯನವಿದೆ. ಬೆಳಗಾವಿ ಹಾಗೂ ಕೊಲ್ಹಾಪುರದ ಸಹಕಾರಿ ವಲಯದಲ್ಲಿ ಉತ್ತಮ ಸಂಬಂಧಗಳಿವೆ. ಆದರೆ, ಕೆಲ ರಾಜಕಾರಣಿಗಳಿಂದಾಗಿ ಗಡಿ ವಿಚಾರ ಬೆಳಗಾವಿಯ ಅಭಿವೃದ್ಧಿಗೆ ಸಂಪರ್ಕಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. 
SCROLL FOR NEXT