ಹಾಸನ: ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವರ್ಗಾವಣೆಯನ್ನು ಖಂಡಿಸಿ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಯುತ್ತಿದೆ.
ಹಾಸನ ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಸಚಿವ ಎ.ಮಂಜು ಅವರ ಪ್ರಭಾವದಿಂದಾಗಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಜೆಡಿಎಸ್ ಆರೋಪಿಸುತ್ತಿದ್ದು, ಸಾರ್ವಜನಿಕ ವಲಯದಿಂದಲೂ ಸಹ ಜಿಲ್ಲಾಧಿಕಾರಿ ವರ್ಗಾವಣೆಯನ್ನು ಖಂಡನೆ ವ್ಯಕ್ತವಾಗಿದೆ.
ಸಚಿವ ಎ. ಮಂಜು ಅವರ ಪ್ರಭಾವದಿಂದ ಹಾಸನ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ ಎಂಬುದಕ್ಕೆ ಪೂರಕವಾಗಿ, ಇತ್ತೀಚೆಗಷ್ಟೇ ಹಾಸನ ಜಿಲ್ಲಾ ಕಾಂಗ್ರೆಸ್ ಮುಖಂಡರು ರೋಹಿಣಿ ಸಿಂಧೂರಿ ಅವರ ವಿರುದ್ಧ ಸಿಎಂ ಸಿದ್ದರಾಮಯ್ಯ ಅವರಿಗೆ ದೂರು ನೀಡಿ ವರ್ಗಾವಣೆಗೆ ಆಗ್ರಹ ಮಾಡಿದ್ದರು ಎಂಬ ವರದಿಗಳು ಪ್ರಕಟವಾಗಿತ್ತು.