ರಾಜ್ಯ

ವಸತಿ ಯೋಜನೆಯಲ್ಲಿ 250 ಕೋಟಿ ಹಗರಣ: ಸಿಬಿಐ ತನಿಖೆಗೆ ಶೆಟ್ಟರ್ ಆಗ್ರಹ

Nagaraja AB

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯಸರ್ಕಾರ ಅನುಷ್ಠಾನಗೊಳಿಸಿರುವ 2 ಸಾವಿರದ 500 ಕೋಟಿ ಮೌಲ್ಯದ ವಸತಿ ಯೋಜನೆಯ ಟೆಂಡರ್ ಪ್ರಕ್ರಿಯೆಲ್ಲಿ 250 ಕೋಟಿಯಷ್ಟು ಹಗರಣವಾಗಿದ್ದು, ಈ ಬಗ್ಗೆ ಸಿಬಿಐ ತನಿಖೆಯಾಗಬೇಕೆಂದು ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್  ಆಗ್ರಹಿಸಿದ್ದಾರೆ.

ಕೇಂದ್ರ ಸರ್ಕಾರದ ಸಹಭಾಗಿತ್ವದ ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ ಬಡವರಿಗಾಗಿ 50 ಸಾವಿರ ಮನೆಗಳ ನಿರ್ಮಾಣ ಕಾಮಗಾರಿಯನ್ನು  43 ಪ್ಯಾಕೇಜ್ ಗಳಾಗಿ ತುಂಡಾಗಿಸಿದ್ದು, ಆಯ್ದ ಗುಂಪಿನ 10 ಗುತ್ತಿಗೆದಾರರಿಗೆ ನೀಡುವ  ಮೂಲಕ ನಿಯಮ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದ್ದಾರೆ.

 ಈ ಸಂಬಂಧ  ಕೊಳಚೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್. ವಿ. ದೇವರಾಜ್  ಕಳೆದ ವರ್ಷ ಬರೆದಿರುವ ಪತ್ರವನ್ನು   ಮಾಧ್ಯಮಗಳಿಗೆ ಬಿಡುಗಡೆಗೊಳಿಸಿದ ಶೆಟ್ಟರ್, ಕಾನೂನುಬಾಹಿರವಾಗಿ ಟೆಂಡರ್ ನೀಡಲಾಗಿದೆ. ಅಧಿಕಾರಿಗಳು ಆಯ್ದ ಗುಂಪಿನ ಗುತ್ತಿಗೆದಾರಿಗೆ  ಟೆಂಡರ್ ನೀಡುವ ಮೂಲಕ ತಪ್ಪು ದಾಖಲೆ ಸೃಷ್ಟಿಸುತ್ತಿದ್ದಾರೆ ಎಂಬಂತಹ ಮಾಹಿತಿ ಉಲ್ಲೇಖಿಸಿರುವುದನ್ನು ವಿವರಿಸಿದರು.

 ಈ ಹಗರಣದಲ್ಲಿ ವಸತಿ ಸಚಿವ ಎಂ. ಕೃಷ್ಣಪ್ಪ ಹಾಗೂ ಅವರ ಮಗ ಪ್ರಿಯಾಕೃಷ್ಣ ಕಮಿಷನ್ ಪಡೆದಿದ್ದಾರೆ ಎಂದು ಶೆಟ್ಟರ್ ಆಪಾದಿಸಿದ್ದಾರೆ.

ಶೆಟ್ಟರ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಗೃಹ ಸಚಿವ ರಾಮಲಿಂಗಾರೆಡ್ಡಿ, ಹಗರಣ ಸಂಬಂಧ ಸಾಕ್ಷ್ಯಾಧಾರ ಇದ್ದರೆ ಬಿಜೆಪಿ ನಾಯಕರು ಪೊಲೀಸರಿಗೆ ದೂರು ಸಲ್ಲಿಸಲಿ ಎಂದು ತಿಳಿಸಿದ್ದಾರೆ.



SCROLL FOR NEXT