ಬೆಂಗಳೂರು: ಭಕ್ತರ ಪಾಲಿಗೆ ನಡೆದಾಡುವ ದೇವರು ಎಂದೇ ಕರೆಯಲ್ಪಡುವ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ನೀಡಬೇಕೆಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿಗೆ ಪತ್ರ ಬರೆದಿದ್ದಾರೆ.
ತ್ರಿವಿಧ ದಾಸೋಹಿಯಾದ ಶಿವಕುಮಾರ ಸ್ವಾಮೀಜಿಯ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಅವರಿಗೆ ದೇಶದ ಅತ್ಯುನ್ನತ ಗೌರವವಾದ ಭಾರತ ರತ್ನ ನೀಡಬೇಕು ಎಂದು ಸಿದ್ದರಾಮಯ್ಯ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದಾರೆ.
ತುಮಕೂರಿನ ಸಿದ್ದಗಂಗಾ ಮಠಕ್ಕೆ 600 ವರ್ಷಗಳ ಇತಿಹಾಸವಿದೆ.ಇಲ್ಲಿ ಹಲವಾರು ಸಿದ್ದಪುರುಷರು ಆಗಿ ಹೋಗಿದ್ದಾರೆ. 1941ರಿಂದ ಇಂದಿನವರೆಗೆ ಶಿವಕುಮಾರ ಸ್ವಾಮೀಜಿ ತಮ್ಮ ಮಠಕ್ಕೆ ಆಗಮಿಸಿದ ಎಲ್ಲಾ ಜಾತಿ, ಮತಗಳ ಜನರನ್ನು ಆತ್ಮೀಯವಾಗಿ ಸತ್ಕರಿಸಿದ್ದಾರೆ. ಮಠವು ಒಟ್ಟಾರೆ 130 ವಿದ್ಯಾ ಸಂಸ್ಥೆಗಳನ್ನು ತೆರೆದಿದ್ದು 9 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಉಚಿತ ವಸತಿ, ಶಿಕ್ಷಣ ಒದಗಿಸಲಾಗುತ್ತಿದೆ.
ಕಳೆದ ಎಂಟು ದಶಕಗಳಿಂದ ಸಮಾಜದ ಎಲ್ಲಾ ವರ್ಗಗಳ ಜನರ ಸೇವೆಯಲ್ಲಿ ನಿರತರಾಗಿರುವ 111 ವರ್ಷದ ಶಿವಕುಮಾರ ಸ್ವಾಮಿಗಳು ಸಮಾಜ ಸೇವೆ, ಶಿಕ್ಷಣ, ಆಧ್ಯಾತ್ಮ ಕ್ಷೇತ್ರಗಳಲ್ಲಿ ಮಹತ್ವದ ಸೇವೆ ಸಲ್ಲಿಸಿದ್ದಾರೆ ಎಂದು ಮುಖ್ಯಮಂತ್ರಿಗಳು ಪತ್ರದಲ್ಲಿ ತಿಳಿಸಿದ್ದಾರೆ.
ಶಿವಕುಮಾರ ಸ್ವಾಮೀಜಿಯವರಿಗೆ ಭಾರತರತ್ನವನ್ನು ನೀಡಬೇಕು ಎನ್ನುವುದು ಲಕ್ಷಾಂತರ ಭಕ್ತರ ಮನವಿಯಾಗಿದ್ದು ಈ ಹಿಂದೆ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಸಹ ಶ್ರೀಗಳಿಗೆ ಭಾರತ ರತ್ನ ನೀಡಬೇಕೆಂಡು ಕೋರಿ ಪ್ರಧಾನಿಗೆ ಪತ್ರ ಬರೆದಿದ್ದರು.