ಬೆಂಗಳೂರು: ಕಳಸಾ ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ರೈತರು ಸತತ ಪ್ರತಿಭಟನೆ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಈ ಬಗ್ಗೆ ಸ್ಪಂದಿಸುತ್ತಿಲ್ಲ. ಇದೇ ಕಾರಣಕ್ಕೆ ಕರ್ನಾಟಕ ಬಂದ್ ಮಾಡಲಾಗುತ್ತಿದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ಗುರುವಾರ ಕರೆ ನೀಡಿರುವ ಕರ್ನಾಟಕ ಬಂದ್ ಗೆ ರಾಜ್ಯ ಸರ್ಕಾರಿ ನೌಕರರ ಸಂಘ, ಲಾರಿ ಚಾಲಕರ ಸಂಘ, ರಾಜ್ಯ ಫಿಲ್ಮ್ ಛೇಂಬರ್ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ನೀಡಿವೆ. ಈ ಹಿನ್ನೆಲೆಯಲ್ಲಿ ಬೆಳಗ್ಗೆ 6ರಿಂದ ಸಂಜೆ 6ಗಂಟೆವರೆಗೆ ಬಂದ್ ನಡೆಯಲಿದೆ ಎಂದು ಹೇಳಿದರು.
ಅಂತೆಯೇ ಸಾರ್ವಜನಿಕರಿಗೆ ತೊಂದರೆ ಕೊಡಬೇಕು ಎಂಬ ಉದ್ದೇಶದಿಂದ ಬಂದ್ ಮಾಡಿಸುತ್ತಿಲ್ಲ. ಕಳೆದ 3 ವರ್ಷಗಳಿಂದ ಗದಗ, ನವಲಗುಂದ ಭಾಗದ ರೈತರು ಗಾಂಧಿ ಮಾದರಿಯ ಸತ್ಯಾಗ್ರಹದ ರೀತಿಯಲ್ಲಿಯೇ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಯಾರೊಬ್ಬರೂ ಅವರ ಸಮಸ್ಯೆಯನ್ನು ಕೇಳಿಲ್ಲ. ಈ 3 ವರ್ಷಗಳಲ್ಲಿ ಪ್ರಧಾನಿ ಮೋದಿ ಸಾಕಷ್ಟು ಬಾರಿ ಕರ್ನಾಟಕಕ್ಕ ಆಗಮಿಸಿದ್ದಾರೆ. ಆದರೆ ಒಂದು ಬಾರಿಯೂ ರೈತರ ಸಮಸ್ಯೆ ಆಲಿಸುವ ಕೆಲಸ ಮಾಡಿಲ್ಲ. ಕನಿಷ್ಟ ಪಕ್ಷ ಪ್ರಧಾನಿ ಮೋದಿ ಕರ್ನಾಟಕಕ್ಕೆ ಬಂದಾಗ ಅವರ ಪಕ್ಷದವರೂ ಕೂಡಾ ಈ ಬಗ್ಗೆ ಅವರ ಗಮನಕ್ಕೆ ತಂದಿಲ್ಲ. ಮಹದಾಯಿ ವಿಚಾರದಲ್ಲಿ ಪ್ರಧಾನಿ ಮೋದಿ ಅವರು ಮಧ್ಯಪ್ರವೇಶಿಸುತ್ತಾರೆಂದು ಬಿಜೆಪಿಯವರು ಭರವಸೆ ನೀಡಿದರೆ ರಾಜ್ಯ ಬಂದ್ ಹಾಗೂ ಫೆಬ್ರವರಿ 4ರ ಬಂದ್ ವಾಪಸ್ ಪಡೆಯುತ್ತೇವೆ ಎಂದು ಹೇಳಿದರು.
ಇದೇ ವೇಳೆ ಕರ್ನಾಟಕ ಬಂದ್ ರಾಜಕೀಯ ಪ್ರೇರಿತ ಅಲ್ಲ ಅಲ್ಲ ಎಂದು ಹೇಳಿದ ವಾಟಾಳ್ ಇದು ಸಾರ್ವಜನಿಕ ಬಂದ್. ಬಂದ್ ವಿಚಾರದಲ್ಲಿ ಯಾವುದೇ ರಾಜಕೀಯ, ಪಿತೂರಿ ಬೇಡ. ಕನ್ನಡ ನಾಡು, ನುಡಿ, ಜಲ, ಭಾಷೆ ವಿಚಾರದಲ್ಲಿ ನಾವು ಎಂದಿಗೂ ಒಂದಾಗಿರಬೇಕು. ಸಾರ್ವಜನಿಕರು ಬೆಂಬಲ ನೀಡಬೇಕು ಎಂದು ವಾಟಾಳ್ ಮನವಿ ಮಾಡಿದರು.