ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸಿ ಮಹದಾಯಿ ವಿವಾದ ಇತ್ಯರ್ಥಪಡಿಸಬೇಕು ಎಂದು ಒತ್ತಾಯಿಸಿ ಕನ್ನಡಪರ ಸಂಘಟನೆಗಳು ಗುರುವಾರ ಕರೆ ನೀಡಿದ್ದ ಕರ್ನಾಟಕ ಬಂದ್ ಬಹುತೇಕ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಜನಜೀವನ ಎಂದಿನಂತೆ ಸಹಜ ಸ್ಥಿತಿಗೆ ಮರಳಿದೆ.
ಇಂದು ಬೆಳಗ್ಗೆ 6ಗಂಟೆಯಿಂದ ಸಂಜೆ 6 ಗಂಟೆಯವರೆ ಬಂದ್ ಗೆ ಕರೆ ನೀಡಲಾಗಿತ್ತು. ಕೆಲವು ಜಿಲ್ಲೆಗಳು ಹೊರತುಪಡಿಸಿದರೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವು ಕಲ್ಲು ತೂರಾಟದಂತಹ ಸಣ್ಣಪುಟ್ಟ ಅಹಿತಕರ ಘಟನೆಗಳ ಹೊರತಾಗಿ ಮುಷ್ಕರ ಬಹುತೇಕ ಶಾಂತಿಯುತವಾಗಿತ್ತು.
ಸಂಜೆ 6 ಗಂಟೆಗೆ ಅಧಿಕೃತವಾಗಿ ಬಂದ್ ಹಿಂಪಡೆಯಲಾಗಿದ್ದು, ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯ ವಿವಿಧ ಜಿಲ್ಲೆಗಳಲ್ಲಿ ಕೆಎಸ್ ಆರ್ ಟಿಸಿ ಬಸ್ ಸಂಚಾರ ಆರಂಭಗೊಂಡಿದೆ. ಅಲ್ಲದೆ ಬೆಂಗಳೂರಿನಲ್ಲೂ 5 ಗಂಟೆಯಿಂದಲೇ ಬಿಎಂಟಿಸಿ ಬಸ್ ಸಂಚಾರ ಆರಂಭವಾಗಿದೆ. ಮಾಲ್, ಹೋಟೆಲ್ ಸೇರಿದಂತೆ ಎಲ್ಲಾ ಕಡೆ ಅಂಗಡಿ- ಮುಂಗಟ್ಟುಗಳು ನಿಧಾನವಾಗಿ ತೆರೆದುಕೊಳ್ಳುತ್ತಿವೆ.
ಕನ್ನಡಪರ ಸಂಘಟನೆಗಳು ವಾಟಾಳ್ ನಾಗರಾಜ್ ಹಾಗೂ ನಿರ್ಮಾಪಕ ಸಾರಾ ಗೋವಿಂದು ನೇತೃತ್ವದಲ್ಲಿ ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಲಾಯಿತು. ರ್ಯಾಲಿ ಕಾರ್ಪೋರೇಷನ್ ಸರ್ಕಲ್, ಮೈಸೂರು ಬ್ಯಾಂಕ್ ವೃತ್ತ, ಸರ್ಕಾರಿ ಕಲಾ ಕಾಲೇಜು ಮೂಲಕ ಫ್ರೀಡಂ ಪಾರ್ಕ್ ತಲುಪಿತು. ಈ ವೇಳೆ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕೃತಿ ದಹಿಸಿ, ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics