ಟ್ವಿಟರ್ ನಲ್ಲಿ ನಟ ಪ್ರಕಾಶ್ ರೈ
ಬೆಂಗಳೂರು: ಕಳಸಾ ಬಂಡೂರಿ ನಾಲಾ ಯೋಜನೆ ಮತ್ತು ಮಹದಾಯಿ ನದಿ ನೀರಿಗಾಗಿ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ನಟ ಪ್ರಕಾಶ್ ರೈ ಬೆಂಬಲ ಸೂಚಿಸಿದ್ದು, ಮಹದಾಯಿ ನೀರು ಕನ್ನಡಿಗರ ಮೂಲಭೂತ ಹಕ್ಕು ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವಿಟರ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿರುವ ನಟ ಪ್ರಕಾಶ್ ರೈ, ಕಳಸಾ ಬಂಡೂರಿಯಿಂದ ಹರಿಯುವ ನೀರಿನ ಮೇಲೆ ಕನ್ನಡಿಗರ ಹಕ್ಕಿದೆ. ಅದು ಅವರ ಮೂಲಭೂತ ಹಕ್ಕಾಗಿದ್ದು, ನಮ್ಮ ನೀರನ್ನು ನಾವು ಬಳಿಸಿಕೊಳ್ಳಲು ಬಿಡಬೇಕು. ನಮ್ಮ ಹಕ್ಕಿಗಾಗಿ ನಾವು ಒಗ್ಗೂಡಿ ಹೋರಾಡೋಣ ಎಂದು ಹೇಳಿದ್ದಾರೆ.
ಅಂತೆಯೇ ಪರೋಕ್ಷವಾಗಿ ಬಿಜೆಪಿ ವಿರುದ್ಧ ಕಿಡಿಕಾರಿರುವ ನಟ ಪ್ರಕಾಶ್ ರೈ, ಯಾವುದೇ ರಾಜಕೀಯ ಪಕ್ಷ ಒಮ್ಮೆ ಆಯ್ಕೆಯಾದ ಮೇಲೆ ಅದು ಚುನಾಯಿತ ಪಕ್ಷವಾಗುತ್ತದೆ. ರಾಜಕೀಯ ಪಕ್ಷವಾಗಿ ಅದು ಉಳಿಯುವುದಿಲ್ಲ. ಅದು ಜನರಿಗಾಗಿ ಕೆಲಸ ಮಾಡುವ ಸರ್ಕಾರವಾಗುತ್ತದೆ. ಯಾವುದೇ ಪಕ್ಷ ಕೇಂದ್ರದಲ್ಲಿ ನಮ್ಮ ಸರ್ಕಾರವಿದೆ. ಆ ರಾಜ್ಯದಲ್ಲಿಯೂ ನಮ್ಮದೇ ಸರ್ಕಾರವಿದೆ. ರಾಜಕೀಯ ಪಕ್ಷವಾಗಿ ನಾವು ನೀರು ತರುತ್ತೇವೆ ಎಂಬುದು ಅಪ್ಪಟ ಸುಳ್ಳು. ರಾಜಕೀಯ ಪಕ್ಷಗಳು ತಮ್ಮ ಸಿದ್ಧಾಂತ ಮರೆತು ನಮ್ಮ ಮೂಲಭೂತ ಹಕ್ಕಿಗಾಗಿ ಒಗ್ಗೂಡಿ ಹೋರಾಡಬೇಕಿದೆ. ಎಲ್ಲ ನಾಯಕರು ನಿಮ್ಮ ರಾಜಕೀಯ ಸಿದ್ಧಾಂತವನ್ನು ಪಕ್ಕಕ್ಕಿಟ್ಟು, ನೀರಿನ ವಿಚಾರದಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು. ಮತ್ತು ನೀರಿನ ವಿಚಾರದಲ್ಲೂ ರಾಜಕೀಯ ಮಾಡಿ ಮತ ಬಿಕ್ಷೆ ಬೇಡುವುದನ್ನು ನಿಲ್ಲಿಸಿ. ಎಲ್ಲರೂ ಒಂದಾಗಿ ನೀರಿಗಾಗಿ ಒಂದಾಗಬೇಕು. ಇದೇನೂ ಬಗೆಹರಿಸಲಾಗದ ಸಮಸ್ಯೆ ಅಲ್ಲ.
ಇದು ಜನಪರ ಹೋರಾಟ. ದಯಮಾಡಿ ಜನರ ಮೂಲಭೂತ ಹಕ್ಕಿಗಾಗಿ ಹೋರಾಡಿ, ಈ ಹೋರಾಟದಲ್ಲಿ ನಾನು ಜನರ ಪರ ನಿಲ್ಲುತ್ತೇನೆ. ಒಂದಾಗಿ ಬನ್ನಿ ಒಂದೇ ವೇದಿಕಯಲ್ಲಿ ನಿಲ್ಲಿ. ಒಟ್ಟಾಗಿ ಹೋರಾಡೋಣ, ನಮ್ಮ ಹಕ್ಕನ್ನು ನಾವುಸಾಧಿಸೋಣ ಎಂದು ಪ್ರಕಾಶ್ ರೈ ಹೇಳಿದ್ದಾರೆ.