ಬೆಂಗಳೂರು: ಬೆಂಗಳೂರಿನಲ್ಲಿ 20 ಇಂದಿರಾ ಮೊಬೈಲ್ ಕ್ಯಾಂಟೀನ್ ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ವಿಧಾನಸೌಧ ಬಳಿ ಚಾಲನೆ ನೀಡಿದ್ದಾರೆ.
ಇಂದಿರಾ ಮೊಬೈಲ್ ಕ್ಯಾಂಟೀನ್ ಗೆ ಚಾಲನೆ ನೀಡಿ ಮಾತನಾಡಿದ ಸಿಎಂ, ರಾಜ್ಯದಲ್ಲಿ ಯಾರೂ ಹಸಿವಿನಿಂದ ಬಳಲಬಾರದು. ಕರ್ನಾಟಕವನ್ನು ಹಸಿವು ಮುಕ್ತಗೊಳಿಸುವುದೇ ನಮ್ಮ ಸರ್ಕಾರದ ಉದ್ದೇಶ ಎಂದು ಹೇಳಿದರು. ಅಲ್ಲದೆ ಕಾಲೇಜ್ ಮತ್ತು ಶಾಲೆಗಳಲ್ಲೂ ಇಂದಿರಾ ಕ್ಯಾಂಟೀನ್ ಆರಂಭಿಸುವ ಉದ್ದೇಶ ಇದ್ದು, ಇದರಿಂದ ವಿದ್ಯಾರ್ಥಿಗಳಿಗೆ ಕಡಿಮೆ ಬೆಲೆಗೆ ತಿಂಡಿ ಮತ್ತು ಊಟ ದೊರೆಯಲಿದೆ ಎಂದು ಹೇಳಿದ್ದಾರೆ.
ಬಡವರ ಹಸಿ ನೀಗಿಸುವುದು ಈ ಯೋಜನೆಯ ಪ್ರಮುಖ ಉದ್ದೇಶ. ಆದರೆ ಇದರಲ್ಲೂ ರಾಜಕೀಯ ಮಾಡುವವರಿಗೆ ನಾಚಿಕೆಯಾಗಬೇಕು ಎಂದು ಪ್ರತಿಪಕ್ಷಗಳ ವಿರುದ್ಧ ಸಿಎಂ ವಾಗ್ದಾಳಿ ನಡೆಸಿದರು.
ಜಾಗದ ಕೊರತೆ ಇರುವ ಹಿನ್ನೆಲೆಯಲ್ಲಿ ನಗರದ ಎಲ್ಲಾ ವಾರ್ಡ್ ಗಳಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಇಂದಿರಾ ಕ್ಯಾಂಟೀನ್ ಆರಂಭಿಸಲು ಸಾಧ್ಯವಾಗಿಲ್ಲ. ಜಾಗದ ಕೊರತೆ ಇರುವ ವಾರ್ಡ್ ಗಳಲ್ಲಿ ಸರ್ಕಾರ ಮೊಬೈಲ್ ಕ್ಯಾಂಟೀನ್ ಆರಂಭಿಸಿದೆ. ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಇಂದಿರಾ ಮೊಬೈಲ್ ಕ್ಯಾಂಟೀನ್ ವಾಹನಗಳನ್ನು ನಿಲ್ಲಿಸಲಾಗುತ್ತಿದೆ.
ಟೆಂಪೋ ಟ್ರಾವೆಲ್ಲರ್ ಅನ್ನು ಇಂದಿರಾ ಮೊಬೈಲ್ ಕ್ಯಾಂಟೀನ್ ಆಗಿ ಪರಿವರ್ತಿಸಲಾಗಿದ್ದು, ವಾಹನದಲ್ಲಿ ಸಿಸಿಟಿವಿ ಹಾಗೂ ಜಿಪಿಎಸ್ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗಿದೆ. ವಾಹನದ ಮೇಲ್ಭಾಗದಲ್ಲಿ 400-500 ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕರ್‌ಗಳನ್ನು ಹೊಂದಿದೆ. ಶುದ್ಧ ಕುಡಿಯುವ ನೀರಿನ ಘಟಕವೂ ಇದೆ. ಸಾರ್ವಜನಿಕರು ಊಟ, ತಿಂಡಿ ಸೇವಿಸಿದ ಬಳಿಕ ತಟ್ಟೆಗಳನ್ನು ಡ್ರಮ್‌ಗೆ ಹಾಕುವ ವ್ಯವಸ್ಥೆ ಇದೆ. ತಿಂಡಿ, ಊಟದ ಸಮಯ ಮುಗಿದ ಬಳಿಕ ವಾಹನವು ಅಡುಗೆ ಮನೆ ಬಳಿ ತೆರಲಿದೆ. ಅಲ್ಲಿಯೇ ತಟ್ಟೆಗಳನ್ನು ಶುಚಿಗೊಳಿಸಲಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.