ಚಿತ್ರದುರ್ಗ: ನಟ ಪ್ರಕಾಶ್ ರೈ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಬಂಡ್ಲಾರಹಟ್ಟಿಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಈ ಗ್ರಾಮದಲ್ಲಿ ಫ್ಲೋರೈಡ್ ಸಮಸ್ಯೆ ವ್ಯಾಪಕವಾಗಿದ್ದು ಜನರು ನಿತ್ಯವೂ ಪರದಾಡುವಂತಾಗಿದೆ.
ಈ ಸಂದರ್ಭ ನಟ ಪ್ರಕಾಶ್ ರೈ ಗ್ರಾಮಸ್ಥರ ಜತೆ ಚರ್ಚೆ ನಡೆಸಿ ತಮ್ಮ ಕನಸಿನ ಮಾದರಿ ಗ್ರಾಮದ ಬಗೆಗೆ ವಿವರ ಹಂಚಿಕೊಂಡರು. ಗ್ರಾಮಸ್ಥರ ಸಹಕಾರದೊಡನೆ ಫ್ಲೋರೈಡ್ ನೀರಿನ ಸಮಸ್ಯೆಯನ್ನು ಬಗೆಹರಿಸುವ ಸಂಬಂಧ ಚರ್ಚೆ ನಡೆಸಿದರು. "ನೀವು (ಗ್ರಾಮಸ್ಥರು) ಒಗ್ಗಟ್ಟಿನಿಂದ ಶ್ರಮಿಸಿದರೆ ಈ ಸಮಸ್ಯೆಯಿಂದ ದೂರಾಗಬಹುದು. ಅಲ್ಲದೆ ನಿಮ್ಮ ಗ್ರಾಮ ಮಾದರಿ ಗ್ರಾಮವಾಗಲು ಸಾಧ್ಯ. ಇದಕ್ಕಾಗಿ ನೀವು ಪಕ್ಷಾತೀತವಾಗಿ ಸಹಕರಿಸಬೇಕು." ಪ್ರಕಾಶ್ ರೈ ಹೇಳಿದ್ದಾರೆ.
ನೀರಿನ ತಜ್ಞ ಎನ್ ದೇವರಾಜರೆಡ್ಡಿ ಗ್ರಾಮದಲ್ಲಿನ ಜೀವಜಲದ ಸಮಸ್ಯೆ ಬಗೆಗೆ ವಿವರ ನೀಡಿದರು. ಇದೇ ವೇಳೆ ಗ್ರಾಮದ ಉಪನ್ಯಾಸಕ ಉಮೇಶ್ ಮತ್ತು ಸುತ್ತಲಿನ ಗ್ರಾಮದ ಪ್ರಮುಖರು ಹಾಜರಿದ್ದರು.