ಬೆಂಗಳೂರು: ಇಂದಿನ ದಿನಗಳಲ್ಲಿ ಐಪಿಎಲ್ ನಲ್ಲಿ ಆಟವಾಡುವ ಕ್ರಿಕೆಟಿಗರು ಕೋಟಿ ಕೋಟಿ ಹಣಕ್ಕೆ ಬೇರೆ ಬೇರೆ ತಂಡಗಳಿಗೆ ಹರಾಜಾಗುತ್ತಾರೆ ಎನ್ನುವುದನ್ನು ನಾವು ಕೇಳುತ್ತಿದ್ದೇವೆ. ಆದರೆ ಭಾರತ ತಂಡಕ್ಕಾಗಿ ಆಡಿದ್ದು ವಿಶ್ವ ಕಪ್ ಗೆಲ್ಲಿಸಿಕೊಟ್ಟ ತಂಡದ ಆಟಗಾರರಿಗೆ ಸರ್ಕಾರದಿಂದ ಯಾವ ಸಹಕಾರವೂ ದೊರೆಯುತ್ತಿಲ್ಲ.
2018ರ ಅಂಧರ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿ ಆಟವಾಡಿದ್ದ ಕರ್ನಾಟಕದ ಪ್ರಕಾಶ್ ಜಯರಾಮಯ್ಯ ಮತ್ತು ಸುನಿಲ್ ರಮೇಶ್ ಅವರುಗಳಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಕರ್ನಾಟಕ ರಾಜ್ಯ ಸರ್ಕಾರ ಭರವಸೆ ನೀಡಿದೆ. ಆದರೆ ಇದಕ್ಕೆ ಮುನ್ನ 1983ರಲ್ಲಿ ಕಪಿಲ್ ದೇವ್ ನಾಯಕತ್ವದ ಭಾರತ ತಂಡ ಪ್ರಥಮ ಬಾರಿಗೆ ವಿಶ್ವ ಕಪ್ ಗೆದ್ದಾಗ ಅದರಲ್ಲಿ ಭಾಗವಹಿಸಿದ್ದ ಕರ್ನಾಟಕದ ಸೈಯದ್ ಕಿರ್ಮಾನಿ ಮತ್ತು ರೋಜರ್ ಬಿನ್ನಿ ಅವರುಗಳಿಗೆ ಅಂದಿನ ಸರ್ಕಾರ ನೀಡಿದ್ದ ಸ್ವಂತ ನಿವೇಶನದ ಭರವಸೆ ಮೂವತ್ತಾರು ವರ್ಷಗಳ ಬಳಿಕ ಇಂದಿಗೂ ಈಡೇರಿಲ್ಲ!
ಕಿರ್ಮಾನಿ ಅವರಿಗೆ ಸರ್ಕಾರ ನೀಡಿದ್ದ ನಿವೇಶನದ ಭರವಸೆಯ ಕುರಿತಾಗಿ ಎಕ್ಸ್ ಪ್ರೆಸ್ ಅವರನ್ನು ಮಾತಿಗೆಳೆದಾಗ "ನಾನು ಪ್ರಾರಂಭದಲ್ಲಿ ಕೆಲವು ದಿನ ಅದನ್ನು ನಂಬಿ ಅದಕ್ಕಾಗಿ ವಿದಾನ ಸೌಧಕ್ಕೆ ತೆರಳಿ ಅಧಿಕಾರಿಗಳು, ಮಂತ್ರಿಗಳನ್ನು ಭೇಟಿ ಆಗಿದ್ದೆ. ಆದರೆ ವರ್ಷಗಳು ಉರುಳಿದಂತೆ ನಾನು ಈ ನಿವೇಶನ ಸಿಕ್ಕುವುದೆನ್ನುವ ಆಸೆಯನ್ನೇ ಕೈಬಿಟ್ಟಿದ್ದೇನೆ. ಅದಕ್ಕಾಗಿ ಅಧಿಕಾರಿಗಳ ಹಿಂದೆ ಅಲೆಯುವುದನ್ನು ಬಿಟ್ಟು ಬಿಟ್ಟಿದ್ದೇನೆ." ಎಂದು ನಿರಾಸೆ ವ್ಯಕ್ತಪಡಿಸಿದ್ದಾರೆ.
1983 ರ ವಿಶ್ವ ಕಪ್ ನಲ್ಲಿ ರೋಜರ್ ಬಿನ್ನಿ 18 ವಿಕೆಟ್ ಗಳಿಸಿ ಅತ್ಯಧಿಕ ವಿಕೆಟ್ ಪಡೆದ ಸಾಧನೆ ಮಾಡಿದ್ದರು, ಕಿರ್ಮಾನಿ ಆ ಪಂದ್ಯಾವಳಿಯ ಅತ್ಯುತ್ತಮ ವಿಕೆಟ್ ಕೀಪರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos